- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತುಳು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯ ಆಟಿಡೊಂಜಿ ಕೂಟ: ಚೇತನ್ ಭಂಡಾಜೆ

Atidonji-koota [1]ಬಂಟ್ವಾಳ: ಆಧುನಿಕ ಜಗತ್ತಿನ ಪ್ರಭಾವದಿಂದ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ತುಳು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯ ಆಟಿಡೊಂಜಿ ಕೂಟ ಕಾರ್ಯಕ್ರಮ ಮಾಡುತ್ತಿದ್ದು ಅನಿಷ್ಠ ತಿಂಗಳೆಂದೇ ಹೆಸರಾಗಿದ್ದ ಆಟಿ ತಿಂಗಳು ಇಂದು ತುಳು ನಾಡಿನಾದ್ಯಂತ ಸಂಭ್ರಮದ ತಿಂಗಳಾಗಿ ಮಾರ್ಪಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಎಂದು ಎಸ್.ವಿ.ಎಸ್. ಕಾಲೇಜಿನ ಉಪನ್ಯಾಸಕ ಚೇತನ್ ಭಂಡಾಜೆ ಹೇಳಿದರು.

ಅವರು ಯುವ ವಾಹಿನಿ ಬಂಟ್ವಾಳ ತಾಲೂಕು ಘಟಕ ಬಿ.ಸಿ.ರೋಡಿನ ಘಟಕದ ಕಚೇರಿಯಲ್ಲಿ ರವಿವಾರ ಹಮ್ಮಿಕೊಂಡ ’ಆಟಿಡೊಂಜಿ ಕೂಟ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಬಂಟ್ವಾಳ ತಾಲೂಕು ಬಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಶೇಷಪ್ಪ ಕೊಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಾಹಿನಿ ತಾಲೂಕು ಘಟಕದ ಅಧ್ಯಕ್ಷ ಅರುಣ್ ಕುಮಾರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ವಾಹಿನಿಯ ಮಾಜಿ ಅಧ್ಯಕ್ಷ ಶ್ರೀಧರ್ ಅಮಿನ್, ಯುವ ವಾಹಿನಿಯ ಬಂಟ್ವಾಳ ಘಟಕದಿಂದ ’ವರ್ಷಕ್ಕೊಂದು ಮನೆ ಹರ್ಷಕ್ಕೊಂದು ನೆಲೆ’ ಯೋಜನೆಯಲ್ಲಿ ಸಮಾಜದ ಅರ್ಹ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲಾಗುವುದು. ಈಗಾಗಲೇ ೮ ಲಕ್ಷ ರೂ. ವೆಚ್ಚದಲ್ಲಿ ಬಂಟ್ವಾಳದ ರುಕ್ಕಮ್ಮ ಎಂಬವರಿಗೆ ಮನೆ ನಿರ್ಮಿಸಿ ಕೊಡುವ ಕೆಲಸ ಪ್ರಗತಿಯಲ್ಲಿದೆ. ಹಾಗೆಯೇ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಸಲುವಾಗಿ ’ವಿದ್ಯಾ ನಿಧಿ’ ಎಂಬ ಹೊಸ ಚಿಂತನೆಯೊಂದಿಗೆ ಯುವ ವಾಹಿನಿ ಯೋಜನೆ ರೂಪಿಸಿದೆ ಎಂದರು.

ಸಭಾ ಕಾರ್ಯಕ್ರಮದ ಬಳಿಕ ತುಳು ನಾಡಿನ ವಿವಿಧ ಬಗೆಯ ೨೫ ಖಾದ್ಯೆಗಳನ್ನು ಸವಿಯಲಾಯಿತು.

ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪದ್ಮನಾಭ ಮರೋಳಿ, ಅಂಚನ್ ಗ್ರಾರ್ಮೆನ್ಸ್ ಮಾಲಕ ಪ್ರಕಾಶ್ ಅಂಚನ್, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಕುಂದರ್, ಕಾರ್ಯಕ್ರಮದ ಸಂಚಾಲಕ ಜಯಾ ಪಚ್ಚಿನಡ್ಕ, ಸಂಘದ ಮಾಜಿ ಅಧ್ಯಕ್ಷ ಹರೀಶ್ ಕೊಟ್ಯಾನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ಸುನಿಲ್ ಕುಮಾರ್ ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಸುವರ್ಣ ಧನ್ಯವಾದ ಸಮರ್ಪಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.