- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರ್ನಾಟಕ ಅಲ್ಪಸಂಖ್ಯಾತರ ಆಯೋಗಕ್ಕೆ ರಾಜ್ಯ ಸರ್ಕಾರವು ನ್ಯಾಯಾಂಗ ಅಧಿಕಾರ ನೀಡಿದೆ: ಬಲ್ಕೀಸ್ ಬಾನು

Balkis-Banu [1]ಮಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಆಯೋಗಕ್ಕೆ ರಾಜ್ಯ ಸರ್ಕಾರವು ನ್ಯಾಯಾಂಗ ಅಧಿಕಾರ ನೀಡಿದೆ ಎಂದು ಆಯೋಗದ ಅಧ್ಯಕ್ಷೆ ಬಲ್ಕೀಸ್ ಬಾನು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ಇತರೆ ಆಯೋಗಗಳಿಗೆ ಈ ಅಧಿಕಾರವಿದ್ದರೂ ಅಲ್ಪಸಂಖ್ಯಾತರ ಆಯೋಗಕ್ಕೆ ಇರಲಿಲ್ಲ. ಈ ಬಗ್ಗೆ ಇತ್ತೀಚೆಗೆ ಸರ್ಕಾರ ಆಯೋಗಕ್ಕೆ ನ್ಯಾಯಾಂಗ ಅಧಿಕಾರ ನೀಡಿ ಆದೇಶ ಹೊರಡಿಸಿದೆ. ಇದರಿಂದ ಅಗತ್ಯಬಿದ್ದವರಿಗೆ ಸಮನ್ಸ್ ಸೇರಿದಂತೆ ಸಿವಿಲ್ ಅಧಿಕಾರವನ್ನು ಆಯೋಗವು ಹೊಂದಲಿದೆ ಎಂದು ಹೇಳಿದರು.

ಅಲ್ಪಸಂಖ್ಯಾತರ ಶಾಲೆಗಳ ಪ್ರಮಾಣಪತ್ರ ನೀಡುವಲ್ಲಿ ಸಮಸ್ಯೆಗಳುಂಟಾಗಿರುವುದು ತನ್ನ ಗಮನಕ್ಕೆ ಬಂದಿದೆ. ಅಲ್ಪಸಂಖ್ಯಾತರ ಶಾಲೆಗಳಲ್ಲಿ ಕನಿಷ್ಠ ಶೇ. 25ರಷ್ಟಾದರೂ ಮಕ್ಕಳು ಇದ್ದರೆ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲಾಗುತ್ತದೆ. ಅಲ್ಪಸಂಖ್ಯಾತರಿಗೆ ಶೈಕ್ಷಣಿಕವಾಗಿ ಮುಂದೆ ಬರುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ. ಈ ಕುರಿತು ಆಯೋಗವು ಸೂಕ್ತವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.

ಇತ್ತೀಚೆಗೆ ಅರೇಬಿಕ್ ಭಾಷೆ ಕಲಿಸುತ್ತಿದ್ದಾರೆಂಬ ಕಾರಣಕ್ಕೆ ದುಷ್ಕರ್ಮಿಗಳು ದಾಳಿ ನಡೆಸಿದ ಮಂಗಳೂರಿನ ಬೊಂಡಂತಿಲ ಸೈಂಟ್ ಥಾಮಸ್ ಶಾಲೆಗೆ ತಾನು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶಾಲೆಯ ಮೇಲಾಗಿರುವ ದಾಳಿಯ ಬಗ್ಗೆ ಶಾಲೆಯ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಪಾಲಕರಿಂದ ಇಂದು ಮಾಹಿತಿ ಪಡೆದಿದ್ದು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಂದ ವರದಿ ಪಡೆದು, ಅಲ್ಪಸಂಖ್ಯಾತರ ಆಯೋಗವು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.