ಮಂಜೇಶ್ವರ: ವೃತ್ತಿ ಬದುಕಿನ ತುರ್ತಿನ ನಡುವೆಯೂ ಪ್ರವೃತ್ತಿಯ ವಿಸ್ತಾರತೆಗೆ ಅವಕಾಶ ಕಂಡುಕೊಂಡು ಯಶಸ್ವಿಯಾಗುವುದು ನೈಜ ಅರ್ಥದ ಪುರುಷ ಪ್ರಯತ್ನ. ಯಕ್ಷಗಾನ ಕಲಾ ಪ್ರಕಾರ ಅತ್ಯಂತ ಕ್ಲಷ್ಟ ಸನಿವೇಶಗಳನ್ನು ಎದುರಿಸುತ್ತಿದ್ದಾಗ ಹೊಸ ವ್ಯಾಖ್ಯೆಗಳೊಡನೆ ಪೌರಾಣಿಕ ಕಥಾನಕಗಳನ್ನು ಮರು ಸೃಷ್ಟಿಸಿ ಜನಪ್ರೀಯತೆಗೊಳಿಸುವಲ್ಲಿ ಮುಂಚೂಣಿಯ ಸಾಧನೆಗೈದ ಮಾಸ್ಟರ್ ವಿಷ್ಣು ಭಟ್ ಕಾಸರಗೋಡಿನ ಅನನ್ಯ ಸಾಧಕರಾಗಿದ್ದು ಅವರ ಪರಂಪರೆಯನ್ನು ಮುಂದುವರಿಸುವಲ್ಲಿ ಅವರ ಪುತ್ರ ಡಾ.ಬನಾರಿಯವರು ಶ್ರಮಿಸಿದ್ದಾರೆಯೆಂದು ಹಿರಿಯ ಯಕ್ಷಗಾನ ಅರ್ಥದಾರಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಕುಂಬಳೆ ಸುಂದರ ರಾವ್ ಅಭಿಪ್ರಯ ವ್ಯಕ್ತಪಡಿಸಿದರು.
ಯಕ್ಷಬಳಗ ಹೊಸಂಗಡಿಯ ಬೆಳ್ಳಿಹಬ್ಬ ಸಂಭ್ರಮದ ಅಂಗವಾಗಿ ಭಾನುವಾರ ಸಂಜೆ ಹೊಸಂಗಡಿ ಹಿಲ್ ಸೈಡ್ ಅಡಿಟೋರಿಯಂ ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳ್ಳಿಹಬ್ಬ ಸನ್ಮಾನ ಪುರಸ್ಕೃತ ಕವಿ,ಚಿಂತಕ,ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿಯವರನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು.
ವಾದಗಳಿಲ್ಲದ ಸರಳ ಮಾತುಗಳ ಮೂಲಕ ಕಥಾನಕಗಳನ್ನು ಬೇರೆಯದೇ ದೃಷ್ಟಿಕೋನದಲ್ಲಿ ವಿಶ್ಲೇಶಿಸುವ ಬನಾರಿಯವರ ಕ್ರಮಗಳು ಯಕ್ಷಗಾನ ತಾಳಮದ್ದಳೆ ಕ್ಷೇತ್ರವನ್ನು ಉತ್ತಮ ಮಟ್ಟದಲ್ಲಿ ಬೆಳೆಸುವಲ್ಲಿ ಸಹಾಯಕವಾದವೆಂದು ಅವರು ತಿಳಿಸಿದರು.
ಉದ್ಯಮಿ ಚಂದ್ರಹಾಸ ರೈ ಬೊಳ್ನಾಡುಗುತ್ತು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ತಾರಾನಾಥ ಬಲ್ಯಾಯ ವರ್ಕಾಡಿ ಮಾತನಾಡಿ,ಗಡಿನಾಡು ಕಾಸರಗೋಡಿನ ಕೊಡುಗೆ ಯಕ್ಷಗಾನ ಕ್ಷೇತ್ರಕ್ಕೆ ಅಪರಿಮಿತವಾದ ಸಾಧನಾಶೀಲರನ್ನು ಒದಗಿಸಿದೆ.
ಆಡಳಿತಾತ್ಮಕವಾಗಿ ಕೇರಳದ ಭಾಗವಾಗಿದ್ದರೂ ಕಾಸರಗೋಡು ಇಂದಿಗೂ ಕನ್ನಡದ ಅನನ್ಯತೆಯನ್ನು ಉಳಿಸಿಕೊಂಡು ತನ್ನದೇ ಕೊಡುಗೆ ನೀಡುತ್ತಿರುವುದು ಸ್ತುತ್ಯರ್ಹವೆಂದು ನೆನಪಿಸಿದರು.ಯಕ್ಷಗಾನದ ಪ್ರಕಾರಗಳಾದ ತೆಂಕು,ಬಡಗು,ಬಡಾಬಡಗು,ಹೂವಿನಕೋಲು ಗಳಿಗೆ ಅಕಾಡೆಮಿ ಪ್ರತ್ಯೇಕವಾಗಿ ಕಾಸರಗೋಡು,ದಕ್ಷಿಣ ಕನ್ನಡ,ಉಡುಪಿ,ಕುಂದಾಪುರ ತಾಲೂಕುಗಳ ಕೇಂದ್ರೀಕರಿಸಿ ಅಗತ್ಯವಿದ್ದು ಈ ಬಗ್ಗೆ ಕರ್ನಾಟಕ ಸರಕಾರದೊಡನೆ ಸಮಾಲೋಚನೆ ನಡೆಸಲಾಗುತ್ತಿದೆಯೆಂದು ತಿಳಿಸಿದರು.
ಕೇರಳ ಪಾರ್ತಿಸುಬ್ಬ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು,ಮಾಜಿ ಅಧ್ಯಕ್ಷ ಶಂಕರ ರೈ ಮಾಸ್ಟರ್,ಯುವ ಭಾಗವತ ಪಟ್ಲ ಸತೀಶ ಶೆಟ್ಟಿ,ಸನ್ಮಾನಿತರಾದ ಡಾ.ರಮಾನಂದ ಬನಾರಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಯಕ್ಷಸಂಗಮದ ಸಂಚಾಲಕ ಸತೀಶ್ ಅಡಪ ಸಂಕಬೈಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ,ವಂದಿಸಿದರು.ಕಾರ್ಯಕ್ರಮದ ಮೊದಲು ಬೆಳ್ಳಿ ಹಬ್ಬದ ಅಂಗವಾಗಿ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಉತ್ತರ ಗೋಗ್ರಹಣ ಯಕ್ಷಗಾನ ತಾಳಮದ್ದಳೆ,ಸಭಾ ಕಾರ್ಯಕ್ರಮದ ಬಳಿಕ ನುರಿತ ಕಲಾವಿದರ ಕೂಡುವಿಕೆಯಲ್ಲಿ ರುಕ್ಮಿಣೀ ಸ್ವಯಂವರ ಯಕ್ಷಗಾನ ಪ್ರದರ್ಶನ ನಡೆಯಿತು.
Click this button or press Ctrl+G to toggle between Kannada and English