ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ಸಹಕಾರದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀ ಕೃಷ್ಣಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ

4:28 PM, Tuesday, August 23rd, 2016
Share
1 Star2 Stars3 Stars4 Stars5 Stars
(No Ratings Yet)
Loading...

Udupiಉಡುಪಿ: ಶ್ರೀ ಕೃಷ್ಣಮಠ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠದ ಯತಿದ್ವಯರ ಆಶೀರ್ವಾದದೊಂದಿಗೆ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ಸಹಕಾರದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಆ. 24ರಿಂದ 26ರ ವರೆಗೆ ಶ್ರೀ ಕೃಷ್ಣಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ ಕಾರ್ಯಕ್ರಮಗಳು ಜರಗಲಿವೆ.

ಆ. 24ರಂದು ಬೆಳಗ್ಗೆ 10ಕ್ಕೆ ಶ್ರೀ ಪೇಜಾವರ ಮಠದ ಯತಿದ್ವಯರಿಂದ ಭಜನ ಕಾರ್ಯ ಕ್ರಮ ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯ ಪ್ರಸಿದ್ಧ ಭಜನ ತಂಡ ಗಳಾದ ಹಂಗಾರಕಟ್ಟೆಯ ನೀಲ ಕಂಠೇಶ್ವರ, ಕೋಡಿಬೆಂಗ್ರೆಯ ವಿಠಲರುಖುಮಾಯಿ, ಮೂಲ್ಕಿಯ ವೆಂಕಟರಮಣ ಭಜನಾ ತಂಡಗಳಿಂದ ಭಜನೆ, ಗೋಪಾಲಾಚಾರ್ಯ ನಿರ್ದೇಶನದಲ್ಲಿ ಕೃಷ್ಣ ವೈಭವ ದಾಸರ ಪದಗಳು, 25ರಂದು ಪ್ರಶಸ್ತಿ ವಿಜೇತ ಪುರುಷ ತಂಡಗಳಿಂದ ವಸಂತ ಮಂಟಪದಲ್ಲಿ ಭಜನೆ,  ಬೆಂಗಳೂರಿನ ಡೋಲ್‌ ವಿದ್ವಾನ್‌ ಜಯರಾಮಪ್ಪ ಮತ್ತು ಬಳಗದವ ರಿಂದ ಚಂದ್ರಶಾಲೆಯಲ್ಲಿ ವಿಶೇಷ ನಾಗಸ್ವರವಾದನ ನಡೆಯಲಿದೆ.

ಆ. 26ರಂದು ರಾಜಾಂಗಣದಲ್ಲಿ ಬೆಳಗ್ಗೆ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಹಾಗೂ ಮೂಡಬಿದಿರೆ ಆಳ್ವಾಸ್‌ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಡಾ| ಮೋಹನ ಆಳ್ವ ಅವರು ಭಜನ ಕಾರ್ಯಕ್ರಮ ಉದ್ಘಾಟಿಸುವರು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಪೂರ್ವಾಹ್ನ 10ರಿಂದ ಅಪರಾಹ್ನ 3 ಗಂಟೆಯ ವರೆಗೆ ಶ್ರೀ ಗಣೇಶ್‌ ಬೀಜಾಡಿ ಮತ್ತು ಬಳಗದವರಿಂದ ಭಕ್ತಿಗೀತೆ ಜರಗಲಿದೆ.

ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ ಮತ್ತು ಮಠದ ಒಳಗೆ ವಿಶೇಷವಾಗಿ ಹೂವಿನ ಅಲಂಕಾರವನ್ನು ಮಾಡಲಾಗುವುದು. ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ ಸಮರ್ಪಿಸಿದ ವಿಶೇಷ ಹಾಲು ಪಾಯಸ, ಗುಂಡಿಟ್ಟು ಲಾಡು ಸಹಿತವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ರಾಜಾಂಗಣದಲ್ಲಿ (ಬಫೆ) ಮತ್ತು ಭೋಜನ ಶಾಲೆಯ ಮೇಲೆ ಅನ್ನಸಂರ್ಪಣೆಯ ವ್ಯವಸ್ಥೆ ಮಾಡಲಾಗಿದೆ. ಸುಮಾರು 25,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಈ ಎಲ್ಲ ಕಾರ್ಯಕ್ರಮಗಳ ಪ್ರಾಯೋಜಕರಾದ ಉಡುಪಿ ಕಿದಿಯೂರು ಹೊಟೇಲಿನ ಆಡಳಿತ ನಿರ್ದೇಶಕ, ಸೇವಾ ಸಮಿತಿಯ ಅಧ್ಯಕ್ಷ ಭುವನೇಂದ್ರ ಕಿದಿಯೂರು ಮತ್ತು ಯುವರಾಜ್‌ ಪಿತ್ರೋಡಿ, ಮಸ್ಕತ್‌ ಅವರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English