- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಾಲ ಹಿಂದಿರುಗಿಸದ್ದಕ್ಕೆ ಕೋಪಗೊಂಡ ಯುವಕನೊಬ್ಬ ಸ್ನೇಹಿತನ ತಲೆ ಕಡಿದು ಪೊಲೀಸ್‌ ಠಾಣೆಗೆ ಶರಣು

Anjaneya [1]ದೇವನಹಳ್ಳಿ: 27 ಸಾವಿರ ರೂಪಾಯಿ ಸಾಲ ಹಿಂದಿರುಗಿಸದ್ದಕ್ಕೆ ಕೋಪಗೊಂಡ ಯುವಕನೊಬ್ಬ, ಸ್ನೇಹಿತನ ತಲೆ ಕಡಿದು ರುಂಡ ಸಮೇತ ಪೊಲೀಸ್‌ ಠಾಣೆಗೆ ಬಂದು ಶರಣಾಗಿರುವ ಘಟನೆ ತಾಲೂಕಿನ ವಿಶ್ವನಾಥಪುರ ಠಾಣೆಯಲ್ಲಿ ನಡೆದಿದೆ.

ತಾಲೂಕಿನ ಕೆಂಪತಿಮ್ಮನಹಳ್ಳಿಯ ಮಂಜುನಾಥ್‌ (26) ಬರ್ಬರವಾಗಿ ಕೊಲೆಯಾದ ದುರ್ದೈವಿ. ಉಗನವಾಡಿ ಶಶಿಕುಮಾರ್‌ ಕೊಲೆ ಮಾಡಿ ಪೊಲೀಸರಿಗೆ ಶರಣಾದವ. ಈತ ಕನ್ನಮಂಗಲ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ಅವರ ಪುತ್ರ ಎಂದು ಪೊಲೀಸರು ತಿಳಿಸಿದ್ದಾರೆ.

ಶಶಿಕುಮಾರ್‌ ಮತ್ತು ಮಂಜುನಾಥ್‌ ಸ್ನೇಹಿತರಾಗಿದ್ದು ಶಶಿಕುಮಾರ್‌, ಮಂಜುನಾಥಗೆ 27 ಸಾವಿರ ರೂ. ಸಾಲ ನೀಡಿದ್ದ. ಆದರೆ, ಸಕಾಲದಲ್ಲಿ ಮರು ಪಾವತಿ ಮಾಡದ್ದಕ್ಕೆ ಇಬ್ಬರ ನಡುವೆ ಜಗಳವಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಶಶಿಕುಮಾರ್‌, ಭಾನುವಾರ ರಾತ್ರಿ 11.30ರ ಸುಮಾರಿಗೆ ಉಗನವಾಡಿ ಗ್ರಾಮದಲ್ಲಿದ್ದ ನಿರ್ಜನ ಪ್ರದೇಶದಲ್ಲಿ ಮಚ್ಚಿನಿಂದ ಮಂಜುನಾಥನ ತಲೆ ಕತ್ತರಿಸಿದ್ದಾನೆ. ಜತೆಗೆ ಸ್ನೇಹಿತನ ರುಂಡವನ್ನು ಹಿಡಿದುಕೊಂಡು ಪೊಲೀಸ್‌ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ.

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥನ ಮೃತದೇಹವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯಿಂದ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ.

ಮಂಜುನಾಥ್‌ಗೆ ವಯಸ್ಸಾದ ತಂದೆ, ತಾಯಿ ಹಾಗೂ ಹೆಂಡತಿ, ಸಹೋದರ ಇದ್ದು, ಕಡು ಬಡತನದಲ್ಲಿದ್ದ ಕುಟುಂಬ ದುಡಿಯುತ್ತಿದ್ದ ಮಗನನ್ನು ಕಳೆದುಕೊಂಡು ಕಂಗಾಲಾಗಿದೆ.

ಮೃತನ ತಾಯಿ ಮತ್ತು ಪತ್ನಿಯ ಆಕ್ರಂದನ ಮನಕಲಕುವಂತಿತ್ತು. ಸ್ಥಳಕ್ಕೆ ಎಸ್‌ಪಿ ಅಮಿತ್‌ ಸಿಂಗ್‌, ಡಿವೈಎಸ್‌ಪಿ ನಾಗರಾಜ್‌ ಭೇಟಿ ನೀಡಿ ಪರಿಶೀಲಿಸಿದರು.

ಘಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು, ಯಾರೇ ತಪ್ಪು ಮಾಡಿರಲಿ ಸರಿಯಾದ ಶಿಕ್ಷೆಯಾಗಬೇಕು, ಪೊಲೀಸರು ಸಮಗ್ರ ತನಿಖೆ ನಡೆಸಿ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ತಕ್ಷಣವೇ 4 ಲಕ್ಷ ರೂ. ಪರಿಹಾರ, ಮೃತನ ಪತ್ನಿಗೆ ಕೆಲಸ ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಪರಿಷತ್‌ ಅಧ್ಯಕ್ಷ ಬಸವರಾಜ್‌ನಾಯಕ್‌, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ. ಮಂಜುನಾಥ್‌, ಪುರಸಭೆ ಮಾಜಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ, ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಶಾಮಣ್ಣ, ಪ್ರಧಾನ ಕಾರ್ಯದರ್ಶಿ ಬಿದಲೂರು ನಾಗರಾಜ್‌, ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಕಾಂತ್‌ ಮತ್ತಿತರರಿದ್ದರು.