- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ಎಸಗುವ ಮತೀಯ ಶಕ್ತಿಗಳ ವಿರುದ್ಧ ಜಾಗೃತರಾಗಬೇಕು: ರಮಾನಾಥ ರೈ

Rai [1]ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ಎಸಗುವ ಮತೀಯ ಶಕ್ತಿಗಳ ವಿರುದ್ಧ ಪ್ರಜ್ಞಾವಂತರು ಜಾಗೃತರಾಗಬೇಕು ಹಾಗೂ ಅವರನ್ನು ದೂರವಿಡಬೇಕು ಎಂದು ರಾಜ್ಯ ಅರಣ್ಯ, ಪರಿಸರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ನಗರದ ಸರ್ಕಿಟ್‌ ಹೌಸ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉಭಯ ಜಿಲ್ಲೆಗಳಲ್ಲಿ, ಧರ್ಮ, ದೇವರು, ದೇಶಪ್ರೇಮ, ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ ನೋವು ತರುವ ವಿಚಾರ. ಕೆಂಜೂರಿನಲ್ಲಿ ನಡೆದಿರುವ ಪ್ರವೀಣ್‌ ಪೂಜಾರಿ ಹತ್ಯೆ ಗೋರಕ್ಷಕರ ಮಾನಸಿಕ ಸ್ಥಿತಿ ತೆರೆದಿಟ್ಟಿದೆ. ಗೋರಕ್ಷಣೆ ಹೆಸರಿನಲ್ಲಿ ಹತ್ಯೆ ನಡೆಯುತ್ತಿದೆ ಎಂದರು.

ಗೋರಕ್ಷಣೆ ಹೆಸರಿನಲ್ಲಿ ಅಲ್ಪಸಂಖ್ಯಾಕರು, ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ ಮಾಡುತ್ತಿದ್ದ ಶಕ್ತಿಗಳು ಇದೀಗ ಹಿಂದುಳಿದ ವರ್ಗಗಳ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿವೆ. ಸಮಾಜದಲ್ಲಿ ಸಾಮರಸ್ಯ ಕದಡುವ ಮತೀಯ ಶಕ್ತಿಗಳ ಇಂತಹ ಕೃತ್ಯಗಳನ್ನು ಪ್ರಜ್ಞಾವಂತ ನಾಗರಿಕರು ವಿರೋಧಿಸಬೇಕು ಎಂದರು.

ಗೋರಕ್ಷಕರು ಎಂದು ಹೇಳಿಕೊಳ್ಳುವವರಲ್ಲಿ ಶೇ. 80 ಮಂದಿ ಕ್ರಿಮಿನಲ್‌ಗ‌ಳು ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಈ ಮಾತನ್ನು ನಾನು ಬಹಳ ಹಿಂದೆಯೇ ಹೇಳಿದ್ದೆ. ಈ ಕೃತ್ಯದಲ್ಲಿ ನಿರತರಾಗಿರುವ ಬಜರಂಗದಳದ ಕಾರ್ಯಕರ್ತರಲ್ಲಿ ಶೇ. 90ರಷ್ಟು ಮಂದಿ ಕ್ರಿಮಿನಲ್‌ ಹಿನ್ನೆಲೆಯವರು ಎಂದರು. ಕೆಂಜೂರಿನಲ್ಲಿ ಪ್ರವೀಣ್‌ ಪೂಜಾರಿ ಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ನಿಯೋಗ ಈಗಾಗಲೇ ರಾಜ್ಯ ಡಿಜಿಪಿ ಅವರನ್ನು ಭೇಟಿ ಮಾಡಿ ಆಗ್ರಹಿಸಿದೆ ಎಂದು ಅವರು ಹೇಳಿದರು.

ಬಿಜೆಪಿಯ ತಿರಂಗ ಯಾತ್ರೆ ಉಲ್ಲೇಖೀಸಿದ ಅವರು ನಾಗಪುರದಲ್ಲಿ ತಿರಂಗ ಧ್ವಜ ಹಾರಿಸದ ಇವರು ಇದೀಗ ತಿರಂಗ ಯಾತ್ರೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‌ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ಬಿಜೆಪಿಯವರು ಈಗ ನಡೆಸುತ್ತಿರುವ ಹೋರಾಟ ಅಧಿಕಾರಕ್ಕಾಗಿ ಎಂದರು. ಮೇಯರ್‌ ಹರಿನಾಥ್‌, ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ವಿಶ್ವಾಸ್‌ ಕುಮಾರ್‌ ದಾಸ್‌, ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್‌, ಮುಖಂಡರಾದ ಸುರೇಶ್‌ ಬಲ್ಲಾಳ್‌, ಸದಾಶಿವ ಉಳ್ಳಾಲ, ಪದ್ಮನಾಭ ನರಿಂಗಾನ, ಬಿ.ಎಚ್‌. ಖಾದರ್‌, ಕಣಚೂರು ಮೋನು, ಸಂತೋಷ್‌ ಕುಮಾರ್‌ ಶೆಟ್ಟಿ, ಕಾರ್ಪೊರೇಟರ್‌ಗಳಾದ ಎ.ಸಿ. ವಿನಯರಾಜ್‌, ರಾಧಾಕೃಷ್ಣ ಉಪಸ್ಥಿತರಿದ್ದರು.

ಮಂಗಳೂರು ವಿ.ವಿ.ಯಲ್ಲಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‌ ಶಾ ಅವರ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದಿತ್ತು. ವಿ.ವಿ.ಯಲ್ಲಿ ಅವಕಾಶ ನೀಡುವುದನ್ನು ವಿರೋಧಿಸಿ ಸಿಂಡಿಕೇಟ್‌ನ ಕೆಲವು ಸದಸ್ಯರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರು. ನಾವು ಕೂಡ ಈ ವಿಚಾರವನ್ನು ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದೇವೆ. ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಈ ವಿಚಾರ ಪ್ರಸ್ತಾವಿಸುತ್ತೇನೆ ಎಂದು ಸಚಿವ ರೈ ಹೇಳಿದರು.