ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ಇದರ ಸಹಯೋಗದೊಂದಿಗೆ ಉಚಿತ ಸಹಕಾರಿ ಆರೋಗ್ಯ ಶಿಬಿರ ರವಿವಾರ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಪ್ರಾಥಮಿಕ ಶಾಲಾ ವಿಭಾಗದ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು.
ಶಾಲೆಯ ಸಂಚಾಲಕ ಡಾ. ಪ್ರಭಾಕರ್ ಭಟ್ ಅವರು ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರೈತರ ಬದುಕಿಗೆ ಶಕ್ತಿಯನ್ನು ತುಂಬುವ ಕೆಲಸ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದಿಂದ ನಡೆಯುತ್ತಿದೆ. ಮಾನಸಿಕ ನೆಮ್ಮದಿಗೆ ಆರೋಗ್ಯ ಮುಖ್ಯವಾಗಿದ್ದು ಇಂದಿನ ವ್ಯವಹಾರದ ವ್ಯವಸ್ಥೆಯಲ್ಲಿ ಆಹಾರದ ಪದ್ಧತಿಯನ್ನು ವ್ಯವಸ್ಥಿತವಾಗಿಟ್ಟುಕೊಂಡರೆ ಉತ್ತಮ ಆರೋಗ್ಯ ಸಾಧ್ಯ ಎಂದರು.
ಆರೋಗ್ಯಕರ ಬದುಕಿಗೆ ಯೋಗ ಮತ್ತು ಧ್ಯಾನ ಮುಖ್ಯವಾಗಿದ್ದು ಹಣದ ವ್ಯಾಮೋಹದಿಂದ ಮನುಷ್ಯ ಪ್ರಕೃತಿಯನ್ನು ವಿಷಮಯ ಮಾಡುತ್ತಿದ್ದಾರೆ. ಆ ಮೂಲಕ ಮನುಷ್ಯರ ಆರೋಗ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಸಹಕಾರಿ ತತ್ವದಡಿ ಕೆಲಸ ಮಾಡುವ ಸಂಘ ರೈತರಿಗೆ ಸಾಲ ಸೌಲಭ್ಯದ ಜೊತೆ ರೈತರ ಮಕ್ಕಳು ಶಿಕ್ಷಣಕ್ಕೆ ಮಹತ್ವವನ್ನು ನೀಡಿವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ, ಆರೋಗ್ಯ ಶಿಬಿರವನ್ನು ರೈತರ ಸೇವಾ ಸಹಕಾರಿ ಸಂಘ ಮಾಡುತ್ತಿದೆ ಎಂದರು.
ದೇರಲಕಟ್ಟೆ ಕೆ.ಎಸ್.ಹೆಗಡೆ ಆಸ್ಪತ್ರೆಯ ತಜ್ಞ ವೈದ್ಯ ಡಾ. ಅನುರೂಪ್, ರೈತರ ಸೇವಾ ಸಂಘದ ಉಪಾಧ್ಯಕ್ಷ ಬಿ.ಸುಧಾಕರ್ ರೈ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ಕೆ. ಉಪಸ್ಥಿತರಿದ್ದರು. ಗೋಪಾಲ್ ಕಲ್ಲಡ್ಕ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
Click this button or press Ctrl+G to toggle between Kannada and English