- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪೊಲೀಸರ ಬಹುದಿನಗಳ ಬೇಡಿಕೆ, ಪೊಲೀಸರ ವೇತನ ಹೆಚ್ಚಳ ಸಂಬಂಧ ಕರಡು ಸಿದ್ಧ

Dr-G-Parameshwar [1]ಬೆಂಗಳೂರು: ವೇತನ ಹೆಚ್ಚಳ ಮಾಡಬೇಕು ಎಂಬ ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆ ಶೀಘ್ರವೇ ಈಡೇರುವ ಸಾಧ್ಯತೆ ಕಂಡು ಬಂದಿದೆ.

ಪೊಲೀಸರ ವೇತನ ಹೆಚ್ಚಳ ಸಂಬಂಧ ದೇಶದ ಎಲ್ಲ ರಾಜ್ಯಗಳ ಪೊಲೀಸ್‌ ಇಲಾಖೆಗಳ ವೇತನದ ಮಾಹಿತಿ ಪಡೆದು ಅದರ ಆಧಾರದಲ್ಲಿ ಡಿಜಿಪಿ ಓಂ ಪ್ರಕಾಶ್‌ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ವೇತನ ಪರಿಷ್ಕರಣೆ ಕರಡು ಸಿದ್ಧಗೊಂಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆಯ ನಂತರ ಸರ್ಕಾರ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಸೆ. 2ರಂದು ದೆಹಲಿ ಪ್ರವಾಸ ಕೈಗೊಂಡಿದ್ದು, ಅಲ್ಲಿಂದ ಹಿಂತಿರುಗಿದ ನಂತರ ಶೀಘ್ರವೇ ಪೊಲೀಸ್‌ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ವೇತನ ಹೆಚ್ಚಳಕ್ಕೆ ಸಿಎಂ ಅವರ ಒಪ್ಪಿಗೆ ಪಡೆದು ತೀರ್ಮಾನ ಹೊರ ಬೀಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರದ ಹಾದಿ ಹಿಡಿದಿದ್ದ ಪೊಲೀಸ್‌ ಸಂಘಟನೆಗಳು ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದವು. ಆದರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಸಂಘಟನೆಗಳ ಜತೆ ಮಾತುಕತೆ ನಡೆಸಿ ವೇತನ ಹೆಚ್ಚಳ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ಮುಷ್ಕರದಿಂದ ಹಿಂದೆ ಸರಿದಿದ್ದರು.

ಆ ನಂತರ ದೇಶದ ಎಲ್ಲ ರಾಜ್ಯಗಳಲ್ಲಿ ಪೊಲೀಸರಿಗೆ ನೀಡುತ್ತಿರುವ ವೇತನ, ಭತ್ಯೆ ಕುರಿತು ಮಾಹಿತಿ ತರಿಸಿಕೊಂಡು ಅದರ ಆಧಾರದ ಮೇಲೆ ವೇತನ ಹೆಚ್ಚಳ ಸಂಬಂಧ ಕರಡು ಸಿದ್ಧಪಡಿಸಲು ಡಿಜಿಪಿ ಓಂ ಪ್ರಕಾಶ್‌ ಅವರಿಗೆ ಸೂಚನೆ ನೀಡಲಾಗಿತ್ತು. ಓಂ ಪ್ರಕಾಶ್‌ ಅವರು ವರದಿ ನೀಡಿದ ನಂತರ ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಎರಡು ಸುತ್ತಿನ ಸಭೆಯನ್ನು ಪರಮೇಶ್ವರ್‌ ನಡೆಸಿ, ವೇತನ ಪರಿಷ್ಕರಣೆ ಸಂಬಂಧ ವರದಿ ಸಿದ್ದಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ರಾಜ್ಯದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳು ಹಾಗೂ ಕೆಳ ಹಂತದ ಸಿಬ್ಬಂದಿಗೆ ನೀಡುತ್ತಿದ್ದ ಉಚಿತ ಪಡಿತರದ ಬದಲು ಮಾಸಿಕ 400 ರೂ. ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಪೊಲೀಸ್‌ ಸಿಬ್ಬಂದಿಗೆ ಕಳಪೆ ಗುಣಮಟ್ಟದ ಪಡಿತರ ನೀಡಲಾಗುತ್ತಿದೆ ಎಂದು ದೂರು ಕೇಳಿ ಬಂದಿದ್ದರಿಂದ ಪಡಿತರ ಬದಲು ಹಣ ನೀಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭರವಸೆ ನೀಡಿದ್ದರು.