ಪುತ್ತೂರು: ಸುಳ್ಯ ತಾಲೂಕು ಬೆಳ್ಳಾರೆ ಬಳಿಯ ಪೆರುವಾಜೆ ಡಾ. ಶಿವರಾಮ ಕಾರಂತ ಕಾಲೇಜಿನಲ್ಲಿ ಕಳೆದ 2 ದಿನಗಳಿಂದ ಮತ್ತೆ ಸ್ಕಾರ್ಫ್ ವಿವಾದ ಶುರುವಾಗಿದೆ.
ಡಾ. ಶಿವರಾಮ ಕಾರಂತ ಕಾಲೇಜಿನ ಸುಮಾರು 15 ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗೆ ಬರುತ್ತಿದ್ದರು. ಇಲ್ಲಿ ಯಾವುದೇ ಧರ್ಮ ಬೇಡ, ಎಲ್ಲರೂ ಒಂದೇ. ಅವರು ಸ್ಕಾರ್ಫ್ ತೆಗೆಯದೇ ಇದ್ದಲ್ಲಿ ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದರು. ಅಲ್ಲದೆ, ಸ್ಕಾರ್ಫ್ ಗೆ ಅವಕಾಶ ನೀಡದಂತೆ ಮನವಿ ಮಾಡಲಾಗಿತ್ತಾದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ 2 ದಿನಗಳಿಂದ ಕಾಲೇಜು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಬರುತ್ತಿದ್ದಾರೆ. ಕಳೆದ ತಿಂಗಳಷ್ಟೇ ಜಿಲ್ಲೆಯಲ್ಲಿ ಸ್ಕಾರ್ಫ್ ವಿವಾದವಾಗಿತ್ತು.
ವಿದ್ಯಾರ್ಥಿಗಳ ಈ ದೂರು ಸ್ವೀಕರಿಸಿದ ಪ್ರಾಂಶುಪಾಲರು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಜೊತೆಗೆ 15 ದಿನಗಳ ಕಾಲಾವಕಾಶ ವಿದ್ಯಾರ್ಥಿಗಳ ಬಳಿ ಕೇಳಿದ್ದು, ಹೆತ್ತವರ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಕರೆದು ಬಳಿಕ ನಿರ್ಧಾರ ಮಾಡುವುದಾಗಿ ಪ್ರಾಂಶುಪಾಲ ಚಂದ್ರಶೇಖರ ಕಾಂತಮಂಗಲ ಹೇಳಿದ್ದಾರೆ.
Click this button or press Ctrl+G to toggle between Kannada and English