- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಟಾಪ್‌ 10 ಸ್ವಚ್ಛ ಜಿಲ್ಲೆಗಳಲ್ಲಿ ಸ್ಥಾನ ಪಡೆದ ಉಡುಪಿ ಜಿಲ್ಲೆ

udupi-dist [1]ನವದೆಹಲಿ: ದೇಶದ 600 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದ 75 ಸ್ವಚ್ಛ ಜಿಲ್ಲೆಗಳಲ್ಲೇ ಅತಿ ಸ್ವಚ್ಛ ಯಾವುವು ಹಾಗೂ ಕಡಮೆ ಸ್ವಚ್ಛ ಯಾವುವು ಎಂಬುದರ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ಈ ಪೈಕಿ ಟಾಪ್‌ 10 ಸ್ವಚ್ಛ ಜಿಲ್ಲೆಗಳಲ್ಲಿ ಉಡುಪಿ ಸ್ಥಾನ ಪಡೆದಿದ್ದರೆ, 75ರ ಕೊನೆಯಂಚಿನಲ್ಲಿ, ಬಯಲು ಬಹಿರ್ದೆಸೆ ಮುಕ್ತ ರಾಜ್ಯಕ್ಕೆ ಪಣ ತೊಟ್ಟಿರುವ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲರ ಗದಗ ಇದೆ.

ಕೇಂದ್ರ ಸರ್ಕಾರದ ಭಾರತೀಯ ಗುಣಮಟ್ಟ ಪರಿಷತ್ತು ಈ ಸಮೀಕ್ಷೆ ನಡೆಸಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ವರದಿಯನ್ನು ಗುರುವಾರ ಬಿಡುಗಡೆ ಮಾಡಿದರು. ಸಮೀಕ್ಷೆಯನ್ನು ಬಯಲು ಪ್ರದೇಶ ಹಾಗೂ ಗುಡ್ಡಗಾಡು ಪ್ರದೇಶ ಎಂದು ಎರಡು ಭಾಗಗಳಲ್ಲಿ ಪ್ರತ್ಯೇಕಿಸಿ ನಡೆಸಲಾಗಿದೆ.

ಬಯಲು ಪ್ರದೇಶದ ವಿಭಾಗದಲ್ಲಿ ಟಾಪ್‌ 10 ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಸತಾರಾ, ಕೊಲ್ಹಾಪುರ, ರತ್ನಗಿರಿ ಮತ್ತು ಥಾಣೆ (ಮಹಾರಾಷ್ಟ್ರ), ನಾದಿಯಾ, ಮಿಡ್ನಾಪುರ ಪೂರ್ವ, ಹೂಗ್ಲಿ (ಪ.ಬಂಗಾಳ), ಉಡುಪಿ (ಕರ್ನಾಟಕ) ಮತ್ತು ಚುರು (ರಾಜಸ್ಥಾನ) ಜಿಲ್ಲೆಗಳಿವೆ.

ಇನ್ನು ಗುಡ್ಡಗಾಡು ಜಿಲ್ಲೆಗಳಲ್ಲಿ ಹಿಮಾಚಲ ಪ್ರದೇಶದ ಮಂಡಿ ಮೊದಲ ಸ್ಥಾನದಲ್ಲಿದೆ. ಇನ್ನುಳಿದಂತೆ ಈಶಾನ್ಯ ಮತ್ತು ಹಿಮಾಲಯ ತಪ್ಪಲಿನ ಕೆಲ ಜಿಲ್ಲೆಗಳಿವೆ.

ಇದೇ ವೇಳೆ 75 ಸ್ವಚ್ಛ ಜಿಲ್ಲೆಗಳಲ್ಲಿನ ಕಡಮೆ ಸ್ವಚ್ಛ ಜಿಲ್ಲೆಗಳ ಟಾಪ್‌ 10ರ ಪೈಕಿ (ಬಯಲು ಪ್ರದೇಶದ ಜಿಲ್ಲೆಗಳ ವಿಭಾಗ) ರಾಜಸ್ಥಾನದ ಬಿಕಾನೇರ್‌ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕದ ಗದಗ ಜಿಲ್ಲೆ ಕೂಡ ಸ್ಥಾನ ಪಡೆದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ತೋಮರ್‌, “75 ಜಿಲ್ಲೆಗಳಲ್ಲಿ ಕೊನೆಯ ಸ್ಥಾನದಲ್ಲಿರುವ ಜಿಲ್ಲೆಗಳು ಕಳಪೆ ಸಾಧನೆ ಮಾಡಿವೆ ಎಂದಲ್ಲ.

ಸ್ವಚ್ಛ ಜಿಲ್ಲೆಗಳಲ್ಲೇ ಕಡಮೆ ಸಾಧನೆ ಮಾಡಿದಂಥವು’ ಎಂದರು. ಕರ್ನಾಟಕಕ್ಕೆ 19ನೇ ಸ್ಥಾನ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡ ರಾಜ್ಯಗಳ ಪೈಕಿ ಕರ್ನಾಟಕ 19ನೇ ಸ್ಥಾನ ಪಡೆದಿದೆ. ಸಿಕ್ಕಿಂ ಸ್ವಚ್ಛ ರಾಜ್ಯ ಎನಿಸಿಕೊಂಡಿದ್ದು, ನಂತರದ ಸ್ಥಾನವನ್ನು ಕೇರಳ ಮತ್ತು ಮಿಜೋರಂ ರಾಜ್ಯಗಳು ಪಡೆದಿವೆ.