- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರಾವಳಿ ರಕ್ಷಣಾ ಪಡೆಯ ವಾಯುನೆಲೆ ಆರಂಭ

vayunele [1]ಮಂಗಳೂರು: ಕರಾವಳಿ ರಕ್ಷಣಾ ಪಡೆಯ ವಾಯುನೆಲೆ(ಏರ್ ಎನ್‍ಕ್ಲೇವ್)ಯನ್ನು ಕೋಸ್ಟ್‌‌ಗಾರ್ಡ್ ಮಹಾನಿರ್ದೇಶಕ ರಾಜೇಂದ್ರ ಸಿಂಗ್ ಬಜ್ಪೆಯಲ್ಲಿ ಉದ್ಘಾಟಿಸಿದರು.

ಬಜ್ಪೆಯ ಹಳೆ ವಿಮಾನ ನಿಲ್ದಾಣದಲ್ಲಿ ಸುಮಾರು 15 ಎಕರೆ ಜಾಗದಲ್ಲಿ ಈ ವಾಯುನೆಲೆ ನಿರ್ಮಿಸಲಾಗಿದೆ. ಈ ವಾಯುನೆಲೆಯ ಮೊದಲ ಕಮಾಂಡಿಂಗ್ ಅಧಿಕಾರಿಯಾಗಿ ಕಮಾಂಡೆಂಟ್ ಪಿ.ಕೆ. ಜಸ್ವಾಲ್‌‌ ಅವರನ್ನು ನೇಮಿಸಲಾಗಿದೆ.

ಈ ವೇಳೆ ರಾಜೇಂದ್ರ ಸಿಂಗ್, ಕೋಸ್ಟ್ ಗಾರ್ಡ್ ಪತ್ನಿಯರ ಕಲ್ಯಾಣ ಸಂಘದ ಅಧ್ಯಕ್ಷೆ ಉರ್ಮಿಳಾ ಸಿಂಗ್, ಹೆಚ್ಚುವರಿ ಮಹಾನಿರ್ದೇಶಕ ಕೆ.ನಟರಾಜನ್ ಉಪಸ್ಥಿತರಿದ್ದರು.

ಮಂಗಳೂರು ವಾಯುನೆಲೆಯ ಮೂಲಕ ವಿವಿಧ ತಟರಕ್ಷಣಾ ಸಂಬಂಧಿ ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ. ಸಾಗರ ಸರ್ವೇಕ್ಷಣೆ, ಶೋಧ ಮತ್ತು ಪತ್ತೆ, ತೈಲ ಸೋರಿಕೆ ವೇಳೆ ಸ್ಪಂದನೆ, ವಿಪತ್ತಿನಲ್ಲಿರುವ ಮೀನುಗಾರರ ರಕ್ಷಣೆ, ಕಳ್ಳಸಾಗಣೆ ತಡೆಯಂತಹ ಕಾರ್ಯಾಚರಣೆಯಲ್ಲಿ ಸಹಕಾರ ನೀಡಲಿದೆ.

ರಾಜ್ಯದ ನೌಕಾಯಾನ ಗಣನೀಯವಾಗಿ ಹೆಚ್ಚುತ್ತಿದ್ದು, ಮಂಗಳೂರು, ಕಾರವಾರದಂತಹ ಪ್ರಮುಖ ಬಂದರುಗಳನ್ನು ಹೊಂದಿದೆ. ಇವು ರಾಷ್ಟ್ರದ್ರೋಹಿ ಕೃತ್ಯದ ಗುರಿಗಳಾಗುವ ಅಪಾಯ ಇರುವುದರಿಂದ ಹಾಗೂ ಈ ಕರಾವಳಿಯ ಸಾವಿರಾರು ಬೆಸ್ತರು ಮೀನುಗಾರಿಕೆಯಲ್ಲಿ ತೊಡಗಿರುವುದರಿಂದ ಕೋಸ್ಟ್‌‌ಗಾರ್ಡ್‍ ವಾಯುನೆಲೆಯ ಅಗತ್ಯತೆ ಹೆಚ್ಚಿದೆ. ಸಾಗರದಲ್ಲಿ ಉಂಟಾಗುವ ಯಾವುದೇ ರೀತಿಯ ಸವಾಲುಗಳಿಗೂ ಈ ವಾಯುನೆಲೆಯ ಮೂಲಕ ಕೋಸ್ಟ್‌‌ಗಾರ್ಡ್‍ನ ವಿಮಾನಗಳು ತಮ್ಮನ್ನು ಒಡ್ಡಿಕೊಳ್ಳಲಿವೆ.

ಈಗಾಗಲೇ ಕೋಸ್ಟ್‌‌ಗಾರ್ಡ್‍ನ ವಿಮಾನಗಳು ಮಂಗಳೂರು ಹಳೆಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಳಕೆ ಮಾಡಿಕೊಳ್ಳುತ್ತಿವೆ. ಏರ್ ಎನ್‍ಕ್ಲೇವ್ ಸ್ಥಾಪನೆ ಅಧಿಕೃತವಾಗಿ ಆಗಿದ್ದರೂ, ವಿಮಾನ ನಿಲ್ದಾಣ ನಿರ್ಮಾಣ ಮತ್ತಿತರ ವ್ಯವಸ್ಥೆ ಪೂರ್ಣಗೊಳ್ಳಲು ಕೆಲ ತಿಂಗಳುಗಳು ಬೇಕಾಗಬಹುದು. ಅದರ ಬಳಿಕ ಉನ್ನತ ಸಚಿವರು ಬಂದು ಅಧಿಕೃತವಾಗಿ ಈ ವಾಯುನೆಲೆಯನ್ನು ಉದ್ಘಾಟಿಸಲಿದ್ದಾರೆ ಎಂದು ಕೋಸ್ಟ್‌‌ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.