- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಂಗಳೂರಿನ 16 ಬಡಾವಣೆಗಳಲ್ಲಿ ಸೆಪ್ಟೆಂಬರ್ 13ರಿಂದ 14ರವರೆಗೆ ಕರ್ಫ್ಯೂ ಜಾರಿ

karpue [1]ಬೆಂಗಳೂರು: ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಸುಪ್ರೀಂಕೋರ್ಟ್ ಆದೇಶ ಬಂದ ನಂತರ ನಗರದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ 16 ಬಡಾವಣೆಗಳಲ್ಲಿ ಸೆಪ್ಟೆಂಬರ್ 13ರಿಂದ 14ರವರೆಗೆ ಕರ್ಫ್ಯೂ ಜಾರಿ ಮಾಡಲಾಗಿದ್ದು, ಕಂಡಲ್ಲಿ ಗುಂಡಿಗೆ ಆದೇಶ ನೀಡಲಾಗಿದೆ.

ರಾಜರಾಜೇಶ್ವರಿ ನಗರ, ಕೆಪಿ ಅಗ್ರಹಾರ, ಚಂದ್ರಾ ಲೇಔಟ್, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಪೀಣ್ಯ, ಆರ್‌ಎಂಸಿ ಯಾರ್ಡ್, ನಂದಿನಿ ಲೇಔಟ್, ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿ, ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಬ್ಯಾಟರಾಯನಪುರ, ಕೆಂಗೇರಿ, ಮಾಗರಿ ರಸ್ತೆ ಮತ್ತು ರಾಜಾಜಿನಗರ.

ಕರ್ಫ್ಯೂ ಜಾರಿಯಿರುವ ಸಮಯದಲ್ಲಿ ಯಾರೂ ಮನೆಯಿಂದ ಹೊರಬರಬಾರದೆಂದು ನಗರ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ. ಸೋಮವಾರ ಮಧ್ಯಾಹ್ನದ ನಂತರ ನಗರದಾದ್ಯಂತ ವ್ಯಾಪಕ ಹಿಂಸಾಚಾರ ನಡೆದು, 75ಕ್ಕೂ ಹೆಚ್ಚು ತಮಿಳುನಾಡು ನೋಂದಣಿಯ ವಾಹನಗಳು ಬೆಂಕಿಗೆ ಆಹುತಿಯಾದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ಈ ಬಡಾವಣೆಗಳಲ್ಲಿ ಜನರು ಮನೆಯಿಂದ ಹೊರಬರಬಾರದು. ಯಾವುದೇ ಅಹಿತಕರ ಘಟನೆಗೆ ಜನರು ಇಳಿದರೆ ಪೊಲೀಸರು ಅನಿವಾರ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ 15 ಸಾವಿರ ಪೊಲೀಸರು, 10 ಪ್ಯಾರಾ ಮಿಲಿಟರಿ ಫೋರ್ಸ್, 30 ಸಿಆರ್ ಪಿಎಫ್ ತುಕುಡಿ, 20 ಕೆಎಸ್ಆರ್ಪಿ ತುಕುಡಿಗಳನ್ನು ನಿಯೋಜಿಸಲಾಗಿದೆ. ಮಂಗಳವಾರ ನಗರದಾದ್ಯಂತ ಬಿಎಂಟಿಸಿ, ಆಟೋ, ಟ್ಯಾಕ್ಸಿಗಳು ಕೂಡ ಸಂಚರಿಸುವುದು ಅನುಮಾನ. ಇಂದಿನ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.