- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭಾರತಕ್ಕೆ ಇನ್ನೊಂದು ಚಿನ್ನ,ಜಾವಲಿನ್‌ನಲ್ಲಿ ಝಝಾರಿಯಾ ಕಮಾಲ್‌

devendra-jhajharia [1]ರಿಯೋ ಡಿ ಜನೈರೋ : ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇನ್ನೊಂದು ಚಿನ್ನದ ಪದಕ ಲಭಿಸಿದ್ದು, ಜಾವಲಿನ್‌ ಎಸೆತದಲ್ಲಿ ದೇವೇಂದ್ರ ಝಝಾರಿಯಾ ಅವರು ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.

ತಮ್ಮದೆ ಎಫ್ 4‌6 ಪ್ಯಾರಾಲಿಂಪಿಕ್ಸ್‌ ದಾಖಲೆ ಅಳಿಸಿ ಹಾಕಿದ ದೇವೇಂದ್ರ ಅವರು ಪದಕ ಗೆದ್ದು 2 ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2004 ರ ಅಥೆ‌ನ್ಸ್‌ ಗೇಮ್ಸ್‌ನಲ್ಲಿ 62.15 ಮೀಟರ್‌ ಎಸೆದಿದ್ದ ದೇವೆಂದ್ರ ಈ ಬಾರಿ 63.97 ಮೀಟನ್‌ ದೂರ ಜಾವ್‌ಲಿನ್‌ ಎಸೆದರು.

ಈ ಪದಕದೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 2 ಚಿನ್ನ,1ಬೆಳ್ಳಿ ಮತ್ತು 1ಕಂಚಿನ ಪದಕ ಪಡೆದಂತಾಗಿದೆ. ಹೈಜಂಪ್‌ನಲ್ಲಿ ಮರಿಯಪ್ಪನ್‌ ತಂಗವೇಲು ಚಿನ್ನ,ವರುಣ್‌ ಭಾಟಿ ಕಂಚು, ಶಾಟ್‌ಪುಟ್‌ನಲ್ಲಿ ದೀಪಾ ಮಲಿಕ್‌ ಬೆಳ್ಳಿ ಪದಕ ಜಯಿಸಿದ್ದಾರೆ.

ಶಾಕ್‌ ಹೊಡೆದು ಕೈ ಕಳೆದುಕೊಂಡಿದ್ದ ಝಝಾರಿಯಾ
ರಾಜಸ್ತಾನದ ಚುರು ಜಿಲ್ಲೆಯ 36 ರ ಹರೆಯದ ದೇವೇಂದ್ರ ಝಝಾರಿಯಾ ಬಾಲ್ಯದಲ್ಲಿ ಹಣ್ಣು ಕೀಳಲು ಮರವೇರಿದ್ದ ವೇಳೆ ವಿದ್ಯುತ್‌ ತಂತಿ ದಗುಲಿ ಎಡಗೈ ಸಂಪೂರ್ಣ ಸುಟ್ಟಿತ್ತು, ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ವೈದ್ಯರು ಕೈಯನ್ನು ಕತ್ತರಿಸಬೇಕಾದ ಅನಿವಾರ್ಯತೆ ಎದುರಾಯಿತು.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಆರ್‌.ಡಿ.ಸಿಂಗ್‌ ಅವರ ತರಬೇತಿ ದೇವೇಂದ್ರ ಅವರ ಸಾಧನೆಗೆ ನೆರವಾಗಿದೆ.

ಈಗಾಗಲೇ ದೇವೇಂದ್ರ ಝಝಾರಿಯಾ ಅವರು ಪದ್ಮಶ್ರಿ, ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.