- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಾಕ್‌ ಸೇನೆಯ ಗುಂಡೇಟಿಗೆ ಬಲಿಯಾದ 1,000 ಬಲೂಚಿಗಳ ಶವ ಪತ್ತೆ: ವರದಿ

pak [1]ಇಸ್ಲಾಮಾಬಾದ್‌ : ಪಾಕಿಸ್ಥಾನದ ಅತೀ ದೊಡ್ಡ ಪ್ರಾಂತ್ಯವಾಗಿರುವ ಬಲೂಚಿಸ್ಥಾನದಲ್ಲಿ ಘೋರ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲಿಂದ ಮಾಡಿದ್ದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳುವ ಮೂಲಕ ವಿಶ್ವ ಗಮನವನ್ನು ಸೆಳೆದಿದ್ದರು.

ಇದನ್ನು ಪುಷ್ಟೀಕರಿಸುವಂತೆ ಪಾಕ್‌ ದೈನಿಕವೊಂದು, ಸರಕಾರದ ಅಂಕಿ ಅಂಶಗಳನ್ನು ಉಲ್ಲೇಖೀಸಿ, ಪ್ರಕಟಿಸಿರುವ ವರದಿಯ ಪ್ರಕಾರ ಕಳೆದ ಆರು ವರ್ಷಗಳಲ್ಲಿ ಬಲೂಚಿಸ್ಥಾನದ ವಿವಿಧೆಡೆಗಳಲ್ಲಿ ಗುಂಡೇಟಿನಿಂದ ಸತ್ತಿರುವ ಒಂದು ಸಾವಿರ ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಪಾಕಿಸ್ಥಾನದ ಈ ಪ್ರಾಂತ್ಯದಲ್ಲಿ ಜನರ ಭದ್ರತೆ ಮತ್ತು ಸುರಕ್ಷೆಯು ಬಹುದೊಡ್ಡ ಗಂಭೀರ ಸವಾಲಿನ ಪ್ರಶ್ನೆಯಾಗಿದೆ ಎಂದು ವರದಿಯು ಹೇಳಿದೆ.

ಅಧಿಕೃತ ಸರಕಾರಿ ವರದಿಗಳನ್ನು ಉಲ್ಲೇಖೀಸಿ ಪಾಕ್‌ ಪತ್ರಿಕೆ ಮಾಡಿರುವ ವರದಿಯು, ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ 1,000 ಮೃತ ದೇಹಗಳಲ್ಲಿ ಹೆಚ್ಚಿನವು ಬಲೂಚ್‌ ಜನಾಂಗೀಯ ಜನರದ್ದಾಗಿವೆ.

ಪಾಕ್‌ ಸೇನೆ ದೌರ್ಜನ್ಯಕ್ಕೆ ಬಲಿಯಾಗಿರುವ ಜನರ ಪೈಕಿ ಶೇ.22 ಮಂದಿ ಪುಷ್‌ತೂನ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಗುರುತು ಹಿಡಿಯಲ್ಪಡದ ಉಳಿದ ಮೃತದೇಹಗಳಲ್ಲಿ ಹೆಚ್ಚಿನವು ಪಾಕ್‌ ಪಂಜಾಬ್‌, ಅಫ್ಘಾನ್‌ ನಿರಾಶ್ರಿತರು ಹಾಗೂ ಮುಸ್ಲಿಮೇತರರು ಆಗಿದ್ದಾರೆ ಎಂದು ವರದಿ ತಿಳಿಸಿದೆ.

2010ರಿಂದೀಚೆಗೆ ಬಲೂಚಿಸ್ಥಾನದಲ್ಲಿ ಪಾಕ್‌ ಸೇನೆಯ ಗುಂಡೇಟಿಗೆ ಬಲಿಯಾಗಿ ಮೃತಪಟ್ಟವರ 940 ಮೃತದೇಹಗಳು ಸಿಕ್ಕಿವೆಯಾದರೆ ಕ್ವೆಟ್ಟಾದಲಿಲ 346 ಮೃತ ದೇಹಗಳು ಸಿಕ್ಕಿವೆ ಎಂದು ಸರಕಾರವೇ ಸಿದ್ಧಪಡಿಸಿರುವ ವರದಿ ತಿಳಿಸಿದ್ದು ಈ ಕೂಡಲೇ ಈ ಸಂಬಂಧ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.