ಬೆಳ್ತಂಗಡಿ: ಪ್ರಪಂಚವೇ ದ್ವಂದ್ವಗಳಿಂದ ಕೂಡಿದೆ. ದ್ವಂದ್ವಗಳನ್ನು ಮೀರಿದ ಸಂತೋಷ ಭಗವತ್ ಚಿಂತನೆಯಿಂದ ಮಾತ್ರ ಸಾಧ್ಯ. ಭಜನೆ ಮನಸ್ಸುಗಳನ್ನು ಬೆಸೆದು ಲೋಕಕ್ಕೆ ಶಾಂತಿ ನೀಡುತ್ತದೆ ಎಂದು ಮಂಜೇಶ್ವರದ ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ರವಿವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ವತಿಯಿಂದ 18ನೇ ವರ್ಷದ ಭಜನ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಮನಸ್ಸಿಗೆ ಸಂಸ್ಕಾರ ದೊರೆಯಬೇಕು. ನಮಗೆ ಮನಸ್ಸೇ ಮಿತ್ರ, ಮನಸ್ಸೇ ಶತ್ರು. ನಮ್ಮನ್ನು ಉದ್ಧಾರದ ಕಡೆಗೆ ಕೊಂಡೊಯ್ಯುವುದು ಮನಸ್ಸು. ಅಂತಹ ಮನಸ್ಸಿಗೆ ಸಂಸ್ಕಾರ ನೀಡುವುದು ಭಜನೆಯಂತಹ ಧಾರ್ಮಿಕ ಸಂಪ್ರದಾಯಗಳು. ಧರ್ಮ ಅಧರ್ಮದ ಸಂಘರ್ಷವನ್ನು ತಾತ್ವಿಕವಾಗಿ ಪರಿಹರಿಸಬಲ್ಲ ಶಕ್ತಿ ಇದಕ್ಕಿದೆ ಎಂದರು.
ದಾರಿ ತಪ್ಪಿ ಹೋಗುವ ಸಮಾಜಕ್ಕೆ ದಾರಿದೀಪವಾಗಿ, ಸಮಾಜವನ್ನು ಸುಸ್ಥಿತಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿರುವ ಹೆಗ್ಗಡೆ ಒಂದರ್ಥದಲ್ಲಿ ಧರ್ಮಸ್ಥಳವನ್ನು ಪರಿಪೂರ್ಣ ಧಾರ್ಮಿಕ ಕೇಂದ್ರವಾಗಿಸಿದ್ದಾರೆ. ಎಲ್ಲ ರೀತಿಯ ದುಗುಡ ದುಮ್ಮಾನಗಳಿಗೆ ಇಲ್ಲಿ ಪರಿಹಾರ ಇದೆ ಎಂದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಭಜನ ಕಮ್ಮಟದ ಮೂಲಕ ಮನೆಮನೆಗೆ ಸಂಸ್ಕಾರ ನೀಡುವ ಕಾರ್ಯ ನಡೆಯುತ್ತಿದೆ. ಮನೆಗಳ ಸಂಸ್ಕಾರದ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸುಭಿಕ್ಷೆ ನೆಲೆಸುವಂತೆ ಮಾಡುವ ಕಲ್ಪನೆ ಇದು. ಭಕ್ತಿ ಮಾರ್ಗದಲ್ಲಿ ಮನಶುÏದ್ಧಿ ಮುಖ್ಯ ಎಂದರು.
ಭಜನ ಪರಿಷತ್ ವೆಬ್‌ಸೈಟ್ ಲೋಕಾರ್ಪಣೆ ಮಾಡಿ, ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪ್ರಾರ್ಥನೆ, ಭಜನೆ, ಧ್ಯಾನ, ಯೋಗದಿಂದಲೂ ಗ್ರಾಮದಲ್ಲಿ ಸುಭಿಕ್ಷೆ ನೆಲೆಸುತ್ತದೆ. ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕು. ಅದಕ್ಕಾಗಿ ಭಜನ ಸಂಘಗಳ ಮೂಲಕ ನಾಯಕತ್ವ ಬೆಳೆಸಿಕೊಳ್ಳಬೇಕು. ಸ್ವತ್ಛ ಭಾರತ, ಪರಿಸರ ಮಾಲಿನ್ಯ ತಡೆ, ಆರೋಗ್ಯದ ಪರಿಕಲ್ಪನೆಯನ್ನು ಭಜನ ಸಂಘಗಳ ಮೂಲಕ ಮಾಡಿ ಗ್ರಾಮ ಸುಭಿಕ್ಷ ಮಾಡಬೇಕು ಎಂದರು.
ಪರಿವರ್ತನೆ ಅವಿರತ. ಅಂತೆಯೇ ಭಜನೆಯಲ್ಲೂ ಪರಿವರ್ತನೆಗಳಾಗಿವೆ. ಹಳೆಯ ಕಾಲದ ಸಂಪ್ರದಾಯಬದ್ಧ ಹಾಡುಗಳೇ ಆಗಬೇಕೆಂದೇನಿಲ್ಲ. ಅವುಗಳನ್ನು ಒಂದಷ್ಟು ಪರಿವರ್ತನೆ ಮಾಡಿ. ಆದರೆ ಚ್ಯುತಿ ಬಾರದಂತೆ ಹಾಡಿದರೆ ಅದರ ಆಕರ್ಷಣೆ ಮಾಸುವುದಿಲ್ಲ. ಆಧುನಿಕ ತಾಳ, ಲಯದಲ್ಲಿ ಭಜನೆ ಹಾಡಿದಾಗ ಈಗಿನ ಜನತೆ ಅದರೆಡೆಗೆ ಆಕರ್ಷಿತರಾಗುತ್ತಾರೆ ಎಂದರು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಭಜನ ಕಮ್ಮಟ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ಮಮತಾ ರಾವ್ ವೆಬ್‌ಸೈಟ್ ವಿವರ ನೀಡಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ ವಂದಿಸಿದರು. ಶ್ರೀನಿವಾಸ ರಾವ್ ನಿರ್ವಹಿಸಿದರು. ಡಾ| ಐ. ಶಶಿಕಾಂತ್ ಜೈನ ಸ್ವಸ್ತಿ ಮಂತ್ರ ಪಠಿಸಿದರು.
ಕಳೆದ 17 ವರ್ಷಗಳಲ್ಲಿ 1,510 ಭಜನ ಮಂಡಳಿಗಳ 2,899 ಮಂದಿಗೆ ತರಬೇತಿ ನೀಡಲಾಗಿದೆ. ಈ ಬಾರಿ 130 ಮಂಡಳಿಗಳ 210 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಸೆ. 25ರಂದು ಭಜನ ಮಂಗಲೋತ್ಸವ ನಡೆಯಲಿದ್ದು, ಈವರೆಗೆ 4,023 ಭಜನ ಮಂಡಳಿಗಳ 52,457 ಮಂದಿ ಭಜಕರು ಭಜನೋತ್ಸವದಲ್ಲಿ ಭಾಗವಹಿಸಿದ್ದಾರೆ. ಈ ಬಾರಿಯೂ ನಾಲ್ಕೈದು ಸಾವಿರ ಮಂದಿ ಏಕಕಾಲದಲ್ಲಿ ಭಜನೆ ಮಾಡಲಿದ್ದಾರೆ. 8 ದಿನಗಳ ಕಾಲ ಭಜನ ತರಬೇತಿ ನಡೆಯಲಿದೆ.
Click this button or press Ctrl+G to toggle between Kannada and English