- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚಿಲ್ಲರೆ ವಿವಾದದಿಂದ ಮನನೊಂದು ನದಿಗೆ ಹಾರಿದ ಕಂಡೆಕ್ಟರ್‌: ಇನ್ನೂ ಪತ್ತೆಯಾಗದ ಮೃತದೇಹ

condacter [1]ಸುಬ್ರಹ್ಮಣ್ಯ: ಯುವತಿಯೊಂದಿಗಿನ ಚಿಲ್ಲರೆ ವಿವಾದದಿಂದ ಮನನೊಂದು ನದಿಗೆ ಹಾರಿದ ಕೆಎಸ್ಸಾರ್ಟಿಸಿ ಬಸ್‌ ಕಂಡೆಕ್ಟರ್‌ ಮಂಗಳೂರು ಗುರುಪುರ ನಿವಾಸಿ ದೇವದಾಸ್‌ (47) ಅವರಿಗಾಗಿ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಎರಡನೇ ದಿನವಾದ ಸೋಮವಾರವೂ ತೀವ್ರ ಶೋಧ ನಡೆಯಿತು. ಆದರೆ ದೇವದಾಸ್‌ ಅವರ ಸುಳಿವು ಲಭಿಸಿಲ್ಲ.

ಸೋಮವಾರ ಮುಂಜಾನೆಯೇ ಪುತ್ತೂರಿನ ಅಗ್ನಿಶಾಮಕ ದಳ ಮತ್ತು ಗುಂಡ್ಯದ 15 ಮಂದಿ ನುರಿತ ಈಜುಗಾರನ್ನು ಒಳಗೊಂಡ ಮುಳುಗು ತಜ್ಞರ ತಂಡ ಕುಮಾರಧಾರೆಯಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿತು. ಸಂಜೆ 6 ಗಂಟೆಯ ತನಕ ನಿರಂತರವಾಗಿ ಅಗ್ನಿ ಶಾಮಕ ದಳದ ಸಿಬಂದಿ ಬೋಟಿನಲ್ಲಿ ಕಾರ್ಯಾಚರಣೆ ನಡೆಸಿದರೂ ಫ‌ಲ ದೊರಕಿಲ್ಲ. ಘಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕವಾಗಿರುವುದರಿಂದ ನದಿಯಲ್ಲಿ ನೀರಿನ ಹರಿವು ಅಧಿಕವಾಗಿದ್ದು, ಕಾರ್ಯಾಚರಣೆಗೆ ತೊಡಕಾಯಿತು.

ರವಿವಾರ ಮುಂಜಾನೆ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಬಸ್‌ನ ನಿರ್ವಾಹಕನಾಗಿ ಕರ್ತವ್ಯದಲ್ಲಿದ್ದ ದೇವದಾಸ್‌ ಅವರೊಂದಿಗೆ ಪ್ರಯಾಣಿಕ ಯುವತಿಯೊಬ್ಬಳು ಚಿಲ್ಲರೆ ವಿಷಯದಲ್ಲಿ ತಕರಾರು ತೆಗೆದು ಜಗಳ ಕಡಬ ಪೊಲೀಸ್‌ ಠಾಣೆಯವರೆಗೆ ಹೋಗಿತ್ತು. ಅಲ್ಲಿ ಪೊಲೀಸ್‌ ಸಿಬಂದಿಯ ಮಧ್ಯಸ್ಥಿಕೆಯಲ್ಲಿ ವಿವಾದ ಇತ್ಯರ್ಥಗೊಂಡಿತ್ತು. ಆದರೆ ಈ ಘಟನೆಯಿಂದ ಮಾನಸಿಕವಾಗಿ ಬಹಳಷ್ಟು ನೊಂದಿದ್ದ ದೇವದಾಸ್‌ ಲಾಗ್‌ಶೀಟ್‌ನಲ್ಲಿ ಡೆತ್‌ನೋಟ್‌ ಬರೆದಿಟ್ಟು ಬಸ್‌ ಕುಮಾರಧಾರಾ ಸೇತುವೆ ಮೇಲಿಂದ ಚಲಿಸುತ್ತಿದ್ದಂತೆ ನೇರವಾಗಿ ನದಿಗೆ ಧುಮುಕಿದ್ದರು.

ಘಟನೆ ಕುರಿತಂತೆ ಚಾಲಕ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು. ಬಸ್‌ನಲ್ಲಿ ದೇವದಾಸ್‌ಗೆ ಸೇರಿದ ಬ್ಯಾಗ್‌, ಪರ್ಸ್‌, ಮೊಬೈಲ್‌, ಲಾಗ್‌ಶೀಟ್‌ ಲಭಿಸಿತ್ತು. ಪರಿಶೀಲಿಸಿದಾಗ ಲಾಗ್‌ಶೀಟ್‌ನಲ್ಲಿ ‘ಮರ್ಯಾದೆ ಇಲ್ಲದೆ ಬದುಕುವುದಕ್ಕಿಂತ ಸಾಯುವುದೇ ಲೇಸು…’ ಎಂದು ಬರೆದಿಟ್ಟಿರುವುದು ಕಂಡುಬಂದಿದೆ. ದೇವದಾಸ್‌ಗೆ ಠಾಣೆಯಲ್ಲಿ ಯಾರೂ ದೌರ್ಜನ್ಯ ನಡೆಸಿಲ್ಲ. ಯುವತಿಯ ದೂರಿನಂತೆ ತಪಾಸಣೆ ಮಾತ್ರ ನಡೆಸಲಾಗಿತ್ತು. ಅವರು ಕೊನೆಯಲ್ಲಿ ಕ್ಷಮೆ ಕೋರಿ ಹಣ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಚಾಲಕ ವಿಜಯ್‌ ಹೀಗೆನ್ನುತ್ತಾರೆ: ಮಂಗಳೂರಿನಿಂದ ಬೆಳಗ್ಗೆ 6.30ಕ್ಕೆ ಹೊರಟಿದ್ದೇವೆ. ರಾಮಕುಂಜ ತಲುಪುವಾಗ ಯುವತಿ ಚಿಲ್ಲರೆ ವಿಚಾರವಾಗಿ ಕಿರಿಕಿರಿ ಆರಂಭಿಸಿದ್ದಾಳೆ. ‘ನಾನು 500 ರೂ. ಕೊಟ್ಟಿದ್ದೆ; ಚಿಲ್ಲರೆ ಹಿಂದಿರುಗಿಸಿದ್ದು ಕಡಿಮೆಯಿದೆ’ ಎಂಬುದು ಆಕೆಯ ಆರೋಪವಾಗಿತ್ತು. ‘ನೀವು ಕೊಟ್ಟದ್ದು 100 ರೂ.; ಅದರಿಂದ ಪ್ರಯಾಣ ದರ ಕಳೆದು ಚಿಲ್ಲರೆ ಕೊಟ್ಟಿದ್ದೇನೆ’ ಎಂಬುದು ನಿರ್ವಾಹಕ ಉತ್ತರಿಸಿದ್ದಾರೆ. ಬಳಿಕ ನಿರ್ವಾಹಕನು ಯುವತಿಯನ್ನು ಕರೆದುಕೊಂಡು ಕಡಬ ಠಾಣೆಗೆ ತೆರಳಿ ನಡೆದ ವಿಷಯ ತಿಳಿಸಿದ್ದಾರೆ. ನೀವು ಬರುವುದು ಬೇಡ ಎಂದು ಹೇಳಿದ್ದರಿಂದ ನಾನು ಜತೆಗೆ ಹೋಗಿರಲಿಲ್ಲ. ಬಳಿಕ ಪೊಲೀಸರು ನನ್ನನ್ನೂಕರೆದು ತಪಾಸಣೆ ನಡೆಸಿದರು.

ನನ್ನಲ್ಲಿ ಕೇವಲ 60 ರೂ. ಕಂಡುಬಂದ ಕಾರಣ ಹಿಂದಕ್ಕೆ ಕಳಿಸಿದರು. ಸುಮಾರು ಎಂಟು ನಿಮಿಷದ ಬಳಿಕ ದೇವದಾಸ್‌ ಹಿಂದಿರುಗಿದ್ದಾರೆ. ಠಾಣೆಯೊಳಗೆ ಏನಾಗಿದೆ ಎಂಬ ಬಗ್ಗೆ ನನ್ನಲ್ಲಿ ಮಾಹಿತಿಯಿಲ್ಲ. ತಿಳಿದಿದ್ದರೆ ಆಗಲೇ ಬಸ್‌ ನಿಲ್ಲಿಸಿ ಸಾರಿಗೆ ಸಂಸ್ಥೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದೆ.

ಬಸ್‌ ಕುಮಾರಧಾರಾ ನದಿ ಸಮೀಪದ ತಿರುವಿಗೆ ಬರುವಷ್ಟರಲ್ಲಿ ನಿರ್ವಾಹಕ ಎರಡು ಬಾರಿ ಸೀಟಿ ಊದಿದ್ದರಿಂದ ಅನಿವಾರ್ಯವಾಗಿ ಬಸ್‌ ನಿಲ್ಲಿಸಿದ್ದೇನೆ. ಕ್ಷಣಾರ್ಧದಲ್ಲಿ ದೇವದಾಸ್‌ ಅವರು ಈ ಕೃತ್ಯ ಎಸಗಿದ್ದಾರೆ. ಸುಮಾರು ಮೂರೂವರೆ ತಿಂಗಳಿಂದ ಒಂದೇ ಬಸ್‌ನಲ್ಲಿ ಸಹೋದರರಂತೆ ದುಡಿಯುತ್ತಿದ್ದೆವು. ಘಟನೆಯಿಂದ ನನಗೆ ಆಘಾತವಾಗಿದೆ ಎಂದು ವಿಜಯ್‌ ಹೇಳಿದ್ದಾರೆ.

ದೇವದಾಸ್‌ ಯುವತಿಗೆ ಟಿಕೆಟ್‌ ನೀಡಿದಾಗ ಅದರ ಹಿಂಬದಿಯಲ್ಲಿ ನೂರು ರೂ.ಗಳಲ್ಲಿ ಟಿಕೆಟ್‌ನ ಹಣ ಕಳೆದು ಬಾಕಿ ಕೊಡಬೇಕಾದ ಮೊತ್ತವನ್ನು ಮಾತ್ರ ನಮೂದಿಸಿದ್ದರು. ಈ ಕುರಿತು ಯುವತಿಯಲ್ಲಿ ಕೇಳಿದ್ದಾಗ ಅದನ್ನು ನಾನು ಗಮನಿಸಿರಲಿಲ್ಲ.  ನಾನು 500 ರೂ. ನೀಡಿದ್ದು, ಹಿಂದಕ್ಕೆ ನೀಡುವ ಮೊತ್ತವನ್ನು ಅವರು ಸರಿಯಾಗಿ ನಮೂದಿಸದಿರಬಹುದು ಎಂದು ಠಾಣೆಯಲ್ಲಿ ವಾದಿಸಿದ್ದರು.

ಸರಕಾರಿ ಉದ್ಯೋಗಿ ಕರ್ತವ್ಯ ನಿರತರಾಗಿರುವಾಗ ಠಾಣೆಗೆ ಕರೆದು, ಆರಕ್ಷಕ ಉಪನಿರೀಕ್ಷರ ಅನುಪಸ್ಥಿತಿಯಲ್ಲಿ ಕೆಳಹಂತದ ಸಿಬಂದಿ ಅವರ ಅಂಗಿ ಬಿಚ್ಚಿಸಿ ತಪಾಸಣೆ ಮಾಡಿರುವುದು ಖಂಡನೀಯ. ದೇವದಾಸ್‌ ಅವರು ನಮ್ಮ ಊರಿನ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಯಾವುದೇ ಕಾರಣಕ್ಕೂ ಮೋಸ ಮಾಡುವಂಥವರಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿ ಅವರು ಈ ಕೃತ್ಯ ಎಸಗಿದ್ದಾರೆ.

ಪೊಲೀಸ್‌ ದೌರ್ಜನ್ಯದ ಕೂಲಂಕಷ ತನಿಖೆ ಆಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಿಟ್ಟಣ್ಣ ರೈ ಗುರುಪುರ ಮತ್ತು ತಾಲೂಕು ಪಂಚಾಯತ್‌ ಸದಸ್ಯ ಸಚಿನ್‌ ಅಡಪ, ಗುರುಪುರ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಉದಯ ಭಟ್‌ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ದೇವದಾಸ್‌ ಅವರ ಪುತ್ರ ಪವನ್‌ ಮಾತನಾಡಿ, ನನ್ನ ತಂದೆ ಸ್ವಾಭಿಮಾನಿಯಾಗಿದ್ದರು. ಶಿಸ್ತು ಮತ್ತು ಸಂಯಮದಿಂದ ಕರ್ತವ್ಯ ನೆರವೇರಿಸುತ್ತಿದ್ದರು. ಸಾರಿಗೆ ಸಂಸ್ಥೆಯಲ್ಲಿ ಅವರಿಗೆ ಮೂರು ಬಾರಿ ಅತ್ಯುತ್ತಮ ನಿರ್ವಾಹಕ ಪ್ರಶಸ್ತಿ ಬಂದಿದೆ. ಚಿಲ್ಲರೆ ವಿಷಯದಲ್ಲಿ ಆತ್ಮಹತ್ಯೆ ಮಾಡುವಂಥ ವ್ಯಕ್ತಿತ್ವ ಅವರದಲ್ಲ. ಕಡಬ ಪೊಲೀಸರಿಂದ ದೌರ್ಜನ್ಯ ಎಸಗಿರುವುದೇ ಅವರು ಈ ಕೃತ್ಯ ಎಸಗಲು ಕಾರಣ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.