- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೀನು ತಿಂದು ಅಸ್ವಸ್ಥರಾದ ಕಾರ್ಮಿಕರು ಆಸ್ಪತ್ರೆಗೆ ದಾಖಲು

fish [1]ಮಂಗಳೂರು: ಮೀನು ತಿಂದು ಅಸ್ವಸ್ಥರಾದ ಸುಮಾರು 200 ಕಾರ್ಮಿಕರು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.

ಇಲ್ಲಿನ ಬರಾಕಾ ಮೀನಿನ ಕಾರ್ಖಾನೆಯ ಕಾರ್ಮಿಕರು ಸಹಿತ ನಾಟೆಕಲ್ ಹಾಗೂ ಉಳ್ಳಾಲದ ಮನೆಮಂದಿ ಅಸ್ವಸ್ಥರಾಗಿ ತೊಕ್ಕೊಟ್ಟು ಸಹಿತ ದೇರಳಕಟ್ಟೆಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇವರ ಪೈಕಿ ಒಂದೇ ಮನೆಯ ನಾಲ್ವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಉಳ್ಳಾಲದಲ್ಲಿರುವ ಫಿಶ್ ಮಿಲ್‌‌ನಲ್ಲಿ ಇರುವ ಸುಮಾರು 300 ಕಾರ್ಮಿಕರು ಶುಕ್ರವಾರ ರಾತ್ರಿ ಊಟ ಮುಗಿಸಿ ಮಲಗುವ ವೇಳೆಗೆ ಅಸ್ವಸ್ಥಗೊಂಡಿದ್ದರು. ಊಟ ಮುಗಿದ ತಕ್ಷಣ ಕೈಕಾಲುಗಳ ಸೆಳೆತ ಮತ್ತು ಬೇಧಿ ಶುರುವಾಗಿತ್ತು ಎನ್ನಲಾಗಿದೆ. ಹಲವರಲ್ಲಿ ಒಂದೇ ತರದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಲವು ಯುವತಿಯರು ಸೇರಿದಂತೆ ಯುವಕರನ್ನು ತೊಕ್ಕೊಟ್ಟು ಸಹಿತ ದೇರಳಕಟ್ಟೆಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇದ್ದ ಕಾರಣ ಹಲವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ. ಶೇ. 50 ರಷ್ಟು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೀನಿನ ತಲೆಯ ಭಾಗದ ಪದಾರ್ಥವನ್ನು ಸೇವಿಸಿದ ನಂತರ ಎಲ್ಲರೂ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ಮೀನನ್ನು ಮಂಗಳೂರಿನ ಧಕ್ಕೆಯಿಂದ ಖರೀದಿಸಿ ಸೇವಿಸಿದ ದ ಉರುಮಣೆ ನಿವಾಸಿ ಒಂದೇ ಕುಟುಂಬದ ನಾಲ್ವರು ದೇರಳಕಟ್ಟೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ನಿವಾಸಿ ಮನೆಯೊಂದರ ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.