- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಪ್ಪ-ಅಮ್ಮನ ಜೀವ ಉಳಿಸಿದ 8ರ ಹರೆಯದ ಹುಡುಗಿ

bajpe [1]ಬಜಪೆ: ಇಲ್ಲಿನ ಹೋಲಿ ಫ್ಯಾಮಿಲಿ ಶಾಲೆಯ ಪಕ್ಕದ ಬೀಬಿಜಾನ್‌ ಯಾನೆ ಮೆಹರುನ್ನಿಸ್‌ ಅವರ ಮನೆಯ ಬಾವಿಗೆ ಹಾಕಿದ ಪಂಪು ಕೆಟ್ಟು ಹೋಗಿದೆ ಎಂದು ಅದನ್ನು ಸರಿಪಡಿಸಲು ಹೋದ ಮನೆಯ ಕೆಲಸದ ಚಿತ್ರದುರ್ಗದ ಪ್ಯಾರಿ ಜಾನ್‌ (23) ಜಾರಿ ಬಾವಿಗೆ ಬಿದ್ದ ಕಾರಣ ಅವರನ್ನು ರಕ್ಷಿಸಲು ಬಾವಿಗೆ ಹಾರಿದ ಆಕೆಯ ಪತಿ ಹುಸೇನ್‌(25)ನ್ನು ಅವರ ಮಗಳು 8ರ ಹರೆಯದ ಸೀಮಾಳ ಸಮಯಪ್ರಜ್ಞೆಯಿಂದಾಗಿ, ಸಾರ್ವಜನಿಕರು, ಬಜಪೆ ಪೊಲೀಸರು ಮತ್ತು ಕದ್ರಿ ಅಗ್ನಿಶಾಮಕ ದಳ ಸಿಬಂದಿ ಸಹಾಯದಿಂದಾಗಿ ಪ್ರಾಣಾಪಾಯದಿಂದ ಬದುಕುಳಿದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಬಜಪೆಯ ಹೋಲಿ ಫ್ಯಾಮಿಲಿ ಶಾಲೆಯ ಸಮೀಪದ ಸಬ್‌ ರಿಜಿಸ್ಟ್ರಾರ್‌ ಆಗಿದ್ದ ದಿ| ಬಾವ ಜಾನ್‌ ಸಾಹೇಬ್‌ ಅವರ ಪತ್ನಿ ಬೇಬಿ ಜಾನ್‌ ಯಾನೆ ಮಹರುನ್ನಿಸ್‌ (80)ಮನೆಯಲ್ಲಿ ಒಬ್ಬಂಟಿಗ ಮಹಿಳೆ. ಅವರ ಮೂರು ಮಕ್ಕಳು ಬೇರೆಡೆ ಇದ್ದ ಕಾರಣ ತಾಯಿಯ ಆರೈಕೆ ಮಾಡಲು ಚಿತ್ರದುರ್ಗದ ಹಿರಿಯೂರಿನ ಹುಸೇನ್‌ ಹಾಗೂ ಪ್ಯಾರಿಜಾನ್‌ ದಂಪತಿಯನ್ನು ಇರಿಸಿಕೊಂಡಿದ್ದರು. ಹುಸೇನ್‌ ದಂಪತಿ ಕಳೆದ ಮೂರು ತಿಂಗಳಿಂದ ಈ ಮನೆಯಲ್ಲಿ ವಾಸವಾಗಿದ್ದಾರೆ. ಮಂಗಳವಾರದ ದುರ್ಘ‌ಟನೆ ಸಂದರ್ಭ ಅಪ್ಪ-ಅಮ್ಮನ ಜೀವ ಉಳಿಸಲು ಕಾರಣಳಾದವಳು ಪುತ್ರಿ ಸೀಮಾ (8). ಆಕೆ ಎರಡನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.

ಮಂಗಳವಾರ ಬೆಳಗ್ಗೆ ನೀರಿನ ಪಂಪಿನ ಸ್ವಿಚ್‌ ಹಾಕಿದಾಗ ನೀರು ಬಾರದೆ ಇದ್ದದ್ದನ್ನು ಗಮನಿಸಿದ ಪ್ಯಾರಿ ಜಾನ್‌, ಬಾವಿಗೆ ಹಾಕಿದ ಪೈಪನ್ನು ಸರಿಪಡಿಸಲು ಹೋದಾಗ ಕಾಲು ಜಾರಿ ಬಾವಿಯ ಒಳಗೆ ಬಿದ್ದರು. ಈ ಸಂದರ್ಭ ಟಿವಿ ನೋಡುತ್ತಿದ್ದ ಅವರ ಗಂಡ ಹುಸೇನ್‌ ಅವರು ಕೂಡ ಪತ್ನಿಯ ರಕ್ಷಣೆಗಾಗಿ ಬಾವಿಗೆ ಇಳಿದರು. ಆದರೆ ಆಗ ಹಗ್ಗ ತುಂಡಾಗಿ ಅವರೂ ಬಾವಿಗೆ ಬಿದ್ದರು.

ಇಬ್ಬರೂ ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಮಗಳು ಸೀಮಾ ಪರಿಸರದ ಅಂಗಡಿಯವರಲ್ಲಿ ತಂದೆ-ತಾಯಿ ಬಾವಿಗೆ ಬಿದ್ದ ವಿಚಾರವನ್ನು ತಿಳಿಸಿದಳು. ಅವರು ಬಜಪೆ ಪೊಲೀಸರಿಗೆ ಸುದ್ದಿ ತಲುಪಿಸಿದರು. ಬಜಪೆ ಪೊಲೀಸರು ಕದ್ರಿ ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದರು. ಈ ಮಧ್ಯೆ ಬಜಪೆ ಪೊಲೀಸರು ಸಾರ್ವಜನಿಕರ ಸಹಾಯದಿಂದ ಹಗ್ಗ ಹಾಗೂ ಹಗ್ಗ ಕಟ್ಟಿದ ಕುರ್ಚಿಯನ್ನು ಬಾವಿಗೆ ಇಳಿಸಿದರು. ಆದರೆ ಅವರಿಗೆ ಬಾವಿಯಲ್ಲಿದ್ದವರನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ಅಷ್ಟರ ವೇಳೆಗೆ ಅಲ್ಲಿಗೆ ಆಗಮಿಸಿದ ಕದ್ರಿ ಅಗ್ನಿಶಾಮಕ ದಳದ ಸಿಬಂದಿ ದಂಪತಿಯನ್ನು ಬಾವಿಯಿಂದ ಮೇಲೆತ್ತುವಲ್ಲಿ ಯಶಸ್ವಿಯಾದರು.

ಹುಸೇನ್‌ ಹಾಗೂ ಪ್ಯಾರಿ ಜಾನ್‌ಗೆ ಸ್ವಲ್ಪ ಗಾಯವಾಗಿದೆ. ಅವರು ಅ.20ಕ್ಕೆ ಊರಿಗೆ ಹೋಗುವವರಿದ್ದರು ಎಂದು ತಿಳಿದುಬಂದಿದೆ. ಬಾವಿಯಲ್ಲಿ ಕಡಿಮೆ ನೀರಿದ್ದ ಕಾರಣ ಹಾಗೂ ಬಜಪೆ ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ಪ್ರಕರಣ ಸುಖಾಂತ್ಯಗೊಂಡಿತು. ಮನೆಯಲ್ಲಿದ್ದ ವಯಸ್ಕರಾದ ಬೇಬಿಜಾನ್‌ ಹಾಗೂ ಬಾಲಕಿ ಸೀಮಾ ಮಾತ್ರ ಇದ್ದರು. ಬಜಪೆ ಪೊಲೀಸರೊಂದಿಗೆ , ಕದ್ರಿ ಅಗ್ನಿಶಾಮಕ ದಳದ ಅಧಿಕಾರಿ ಹಮೀದ್‌ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಗಾಯಗೊಂಡ ದಂಪತಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.