ಎಂಆರ್‌ಪಿಎಲ್ ನ ಮೊದಲ ಕಚ್ಚಾ ತೈಲ ಸ್ವೀಕರಿಸುವ ಅಭೂತಪೂರ್ವ ಕಾರ್ಯಕ್ಕೆ ಚಾಲನೆ

10:18 AM, Thursday, October 13th, 2016
Share
1 Star2 Stars3 Stars4 Stars5 Stars
(No Ratings Yet)
Loading...

isprlಮಂಗಳೂರು: ಐಎಸ್‍ಪಿಆರ್‍ಎಲ್ (ಇಂಡಿಯನ್ ವ್ಯೂಹಾತ್ಮಕ ಪೆಟ್ರೋಲಿಯಂ ಸಂಗ್ರಹ ಲಿಮಿಟೆಡ್) ಮೊದಲ ಕಚ್ಚಾ ತೈಲ ತುಂಬಿದ ಹಡಗು ಮಂಗಳೂರು ಬಂದರಿಗೆ ಬಂದಿದೆ.

ಎಂಆರ್‌ಪಿಎಲ್ (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್)ನ ಸಿಂಗಲ್ ಪಾಯಿಂಟ್ ಮೂರ್‌ನಲ್ಲಿ ತೈಲ ಸ್ವೀಕರಿಸುವ ಅಭೂತಪೂರ್ವ ಕಾರ್ಯಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

ಇರಾನ್‍ನಿಂದ 0.25 ಮಿಲಿಯ ಟನ್ ಕಚ್ಚಾ ತೈಲದ ಮೊದಲ ಹಡಗು ಇದೀಗ ಬಂದು ನಿಂತಿದೆ. ಇದೇ ವರ್ಷ ಇನ್ನೆರಡು ಹಡಗುಗಳು ಇರಾನಿನಿಂದ ತೈಲ ಹೊತ್ತು ತರಲಿವೆ. ವರ್ಷಾಂತ್ಯಕ್ಕೆ ತೈಲಾಗಾರ ಅರ್ಧದಷ್ಟು ತುಂಬುವ ನಿರೀಕ್ಷೆಯಿದೆ ಎಂದು ಐಎಸ್‍ಪಿಆರ್‍ಎಲ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ನಿರ್ದೇಶಕ ರಾಜನ್ ಪಿಳ್ಳೈ ವಿವರಿಸಿದರು.

ದೇಶದ ಇಂಧನ ಸಾಮರ್ಥ್ಯವನ್ನು ಖಾತ್ರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶಾಖಪಟ್ಟಣ, ಮಂಗಳೂರು ಹಾಗೂ ಪಾದೂರಿನಲ್ಲಿ ಐದು ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲದ ಸಂಗ್ರಹಾಗಾರ ನಿರ್ಮಾಣಕ್ಕೆ ನಿರ್ಧರಿಸಿತು. ಇದು ದೇಶದಲ್ಲಿ ಈಗಾಗಲೇ ಇರುವ ಕಚ್ಚಾ ತೈಲ ಹಾಗೂ ಪೆಟ್ರೋಲ್ ಸಂಗ್ರಹಗಳ ಹೆಚ್ಚುವರಿ ಘಟಕವಾಗಿದೆ.

ವಿಶಾಖಪಟ್ಟಣದಲ್ಲಿ ಸಂಗ್ರಹಣೆ ಕಾರ್ಯ ಆರಂಭಗೊಂಡಿದೆ. ಮಂಗಳೂರಿನಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಮಂಗಳೂರಿನ ಭೂಗತ ತೈಲಗಾರವನ್ನು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಉದ್ಘಾಟಿಸಿದರು. ಆದರೆ, ಪಾದೂರು ಮತ್ತು ಮಂಗಳೂರು ತೈಲಗಾರಗಳಿಗೆ ಸಂಪರ್ಕ ಕಲ್ಪಿಸುವ 48 ಇಂಚು ವ್ಯಾಸದ ಪೈಪ್‍ಲೈನ್ ಕೆಲಸ ಪೂರ್ತಿಯಾಗದ ಕಾರಣ ನಿಧಾನಗೊಂಡಿತ್ತು. ಅಲ್ಲದೆ, ಭೂಮಿ ಅಡಿಯಲ್ಲಿ ಬಂಡೆಕಲ್ಲುಗಳನ್ನು ಅಗೆದು ಕೊರೆಯಲಾದ ಬೃಹತ್ ಸುರಂಗಕ್ಕೆ ಮಂಗಳೂರಿನ ನವಮಂಗಳೂರು ಬಂದರಿನ ತೈಲ ಜೆಟ್ಟಿಯಿಂದ ಪೈಪ್‍ಲೈನ್ ಸಂಪರ್ಕ ಆಗುವುದು ಬಾಕಿಯಿತ್ತು. ಇದೀಗ ಆ ಕೆಲಸ ಪೂರ್ಣಗೊಂಡಿದೆ. ಆದರೆ, ಪಾದೂರಿನಲ್ಲಿ ಪೈಪ್‍ಲೈನ್ ಕಾರ್ಯ ಬಾಕಿಯಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English