- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

‘ಸಂತೋಷ’ದಿಂದ ಹೋಗುತ್ತಿದ್ದೇನೆ. ಹುದ್ದೆ ಇಲ್ಲದಿದ್ದರೂ, ಪಕ್ಷದ ಅಭಿವೃದ್ಧಿಗೆ ನಿರಂತರ ದುಡಿಯುತ್ತೇನೆ: ಯಡಿಯೂರಪ್ಪ

CM Yeddyurappa Resigns/ಯಡಿಯೂರಪ್ಪ ರಾಜೀನಾಮೆ [1]

ಬೆಂಗಳೂರು : ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರ್ಕಾರದ ಮುಖ್ಯ ಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಸಂಜೆ 3.30ರ ಸುಮಾರಿಗೆ ತಮ್ಮ ಅಸಂಖ್ಯ ಬೆಂಬಲಿಗರೊಂದಿಗೆ ಅಧಿಕೃತ ನಿವಾಸದಿಂದ ರೇಸ್ ಕೋರ್ಸ್ ರಸ್ತೆಯ ಮೂಲಕ ಹೊರಟು ರಾಜಭವನದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ತಮ್ಮ ಒಂದು ವಾಕ್ಯದ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸಂವಿಧಾನದ ಕಲಂ 164(1)ರ ಅನ್ವಯ ಯಡಿಯೂರಪ್ಪ ಅವರ ರಾಜೀನಾಮೆಯನ್ನು ಸ್ವೀಕರಿಸಿ, ಅಂಗೀಕಾರ ಮುದ್ರೆ ಒತ್ತಿದ್ದಾರೆ. ಹೊಸ ನಾಯಕನ ಆಯ್ಕೆಯಾಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿದರು.

ತನ್ನ ಅಧಿಕಾರವಧಿಯ ಕೊನೆಯ ಕ್ಷಣಗಳಲ್ಲಿ ಬಿಗಿ ಭದ್ರತೆಯ ನಡುವೆ ರಾಜಭವನದತ್ತ ಕಾಲ್ನಡಿಗೆಯಲ್ಲಿ ಸಾಗಿದ ಯಡಿಯೂರಪ್ಪ ಸಾರ್ವಜನಿಕವಾಗಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ಪೊಲೀಸ್ ಸರ್ಪಗಾವಲಿನಲ್ಲಿ ಶ್ವೇತ ವಸ್ತ್ರದಲ್ಲಿದ್ದ ಯಡಿಯೂರಪ್ಪ ಅವರೊಂದಿಗೆ ರೆಡ್ಡಿ ಸೋದರರು, ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಉಮೇಶ್ ಕತ್ತಿ ಸೇರಿದಂತೆ ಎಲ್ಲಾ ಬೆಂಬಲಿಗ ಶಾಸಕರು, ಸಚಿವರು ಹೆಜ್ಜೆ ಹಾಕಿದರು.

ಪಕ್ಷದ ಹೈಕಮಾಂಡ್ ಮೇಲೆ ತಮ್ಮ ಆಪ್ತರಾದ ಸದಾನಂದ ಗೌಡ ಅವರನ್ನು ನೂತನ ಸಿಎಂ ಎಂದು ಘೋಷಿಸುವವರೆಗೂ ರಾಜೀನಾಮೆ ನೀಡಲ್ಲ ಎಂಬ ಬಿಗಿ ಪಟ್ಟು ಹಿಡಿದಿದ್ದ ಸಿಎಂ ಕೊನೆಗೂ ಭಾವೊನ್ಮುಖರಾಗಿ ಎದ್ದು ಹೊರಟರು. ಬಿಜೆಪಿ ಹೈಕಮಾಂಡ್ ಕೂಡಾ ರಾಜೀನಾಮೆ ನೀಡಲು ಯಡಿಯೂರಪ್ಪ ಅವರಿಗೆ ಮಧ್ಯಾಹ್ನ 3 ಗಂಟೆ ತನಕ ಗಡುವು ನೀಡಿತ್ತು.

ಅದಕ್ಕೂ ಮುನ್ನ , ರೇಸ್ ಕೋರ್ಸ್ ರಸ್ತೆಯಲ್ಲಿ ಶಾಸಕರ ಜೊತೆ ಭೋಜನಕೂಟ ನಡೆಸಿದ್ದ ಯಡಿಯೂರಪ್ಪ ಅವರು ತಾವು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದು ಕುಳಿತುಬಿಟ್ಟಿದ್ದರು. ಶಾಸಕರು ಯಡಿಯೂರಪ್ಪ ಅವರಿಗೆ ದಿಗ್ಬಂಧನ ವಿಧಿಸಿ, ಮನೆ ಬಿಟ್ಟು ಹೊರಡದಂತೆ ತಡೆದಿದ್ದರು. ಸಿಎಂ ಅವರ ಬೇಡಿಕೆಗಳ ಪತ್ರದೊಂದಿಗೆ ಪಕ್ಕದಲ್ಲಿರುವ ಹೋಟೆಲ್ ಅಶೋಕಗೆ ಹೋದ ಬಸವರಾಜ ಬೊಮ್ಮಾಯಿ ಅವರು ಅರುಣ್ ಜೇಟ್ಲಿ ಹಾಗೂ ರಾಜನಾಥ್ ಸಿಂಗ್ ಅವರು ಚರ್ಚೆ ನಡೆಸಿದರು.

ಮುಖ್ಯಮಂತ್ರಿಯಾಗಿ ತಮ್ಮ ಕೊನೆಯ ಅಧಿಕೃತ ಕಾರ್ಯಕ್ರಮ ಬಲಿಜ ಸಮಾವೇಶದಲ್ಲಿ ಭಾವುಕರಾಗಿ ಕಂಡುಬಂದಿದ್ದ ಬಿ.ಎಸ್. ಯಡಿಯೂರಪ್ಪ ಅವರು ಸಂತೋಷದಿಂದಲೇ ತಮ್ಮ ಸ್ಥಾನದಿಂದ ಬಿಟ್ಟು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಹುದ್ದೆ ಇಲ್ಲದಿದ್ದರೂ, ಪಕ್ಷದ ಅಭಿವೃದ್ಧಿಗೆ ನಿರಂತರ ದುಡಿಯುತ್ತೇನೆ ಎಂದಿದ್ದಾರೆ.