- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊಡಗಿನ ಜೀವನದಿ ಕಾವೇರಿ ಪವಿತ್ರ ತೀರ್ಥೋದ್ಭವ

kavery [1]ಮಡಿಕೇರಿ: ದಕ್ಷಿಣ ಗಂಗೆ ಎಂದೇ ಕರೆಯಲ್ಪಡುವ ಕೊಡಗಿನ ಜೀವನದಿ ಕಾವೇರಿ ಪವಿತ್ರ ತೀರ್ಥೋದ್ಭವ ಸೋಮವಾರ ಮುಂಜಾನೆ 6.28ಕ್ಕೆ ಆಯಿತು. ಭಕ್ತರ ಜಯಘೋಷದ ನಡುವೆ ಬ್ರಹ್ಮಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಹರಿಯಿತು. ಈ ಬಾರಿ ಒಂದು ನಿಮಿಷ ಮೊದಲು ಕಾವೇರಿ ತೀರ್ಥೋದ್ಭವವಾಗಿದೆ.

ಕಾವೇರ ಮುನಿಯ ತಪಸ್ಸಿನಿಂದಾಗಿ ಜನ್ಮ ತಳೆದ ಕಾವೇರಿ ಕನ್ನಡ ನಾಡಿನ ಜೀವನದಿ. ತಲಕಾವೇರಿ ಕ್ಷೇತ್ರದ ಬ್ರಹ್ಮಗಿರಿಯ ಬುಡದಲ್ಲಿ ಪುಟ್ಟದಾದ ಒಂದು ಕುಂಡಿಕೆಯಲ್ಲಿ ನದಿಯ ರೂಪದಲ್ಲಿ ಹರಿದು ಬರುವ ಈಕೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕನ್ನಿಕೆ ಮತ್ತು ಸುಜ್ಯೋತಿಯೊಂದಿಗೆ ಸಂಗಮವಾಗುತ್ತಾಳೆ

ಪ್ರತಿ ವರ್ಷ ಅಕ್ಟೋಬರ್‌ ತಿಂಗಳ 16 ಅಥವಾ 17 ರಂದು ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಕಾವೇರಿ ತುಲಾಸಂಕ್ರಮಣ ಶ್ರದ್ಧಾ ಭಕ್ತಿಯಿಂದ ನಡೆಯುತ್ತದೆ. ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಪವಿತ್ರ ಮುಹೂರ್ತದಲ್ಲಿ ತಾಯಿ ಕಾವೇರಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಾಳೆ. ಈ ಪುಣ್ಯ ಕಾಲದಲ್ಲಿ ಸಹಸ್ರಾರು ಭಕ್ತರು ತೀರ್ಥಸ್ನಾನ ಮಾಡಿ ಪುನೀತರಾದರು.