- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಸರ್ವೀಸ್

MIA [1]ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಸರ್ವೀಸ್ ಮತ್ತು ನಿಯಂತ್ರಣ ಗೋಪುರಕ್ಕಾಗಿ ನಿರ್ಮಿಸಲಾದ ನೂತನ ಕಟ್ಟಡ ಪ್ರಾಯೋಗಿಕವಾಗಿ ಕಾರ್ಯಾರಂಭಗೊಂಡಿದೆ.

ಇದರಿಂದ ವಿಮಾನ ಹಾರಾಟದ ನಿಯಂತ್ರಣ ಹಾಗೂ ಸುರಕ್ಷತಾ ವ್ಯವಸ್ಥೆ ಇನ್ನಷ್ಟು ಬಲಶಾಲಿಯಾಗಲಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ತಿಳಿಸಿದ್ದಾರೆ.

20 ಕೋಟಿ ವೆಚ್ಚದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಸರ್ವೀಸ್ ಹಾಗೂ ನಿಯಂತ್ರಣ ಗೋಪುರ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಅದರಂತೆ ಜನವರಿ 10ರಂದು ಹೊಸ ನಿಯಂತ್ರಣ ಗೋಪುರ ಕಾರ್ಯಾರಂಭಗೊಂಡಿತ್ತು. ಪ್ರಸಕ್ತ ಎಎನ್‍ಎಸ್ ಸಲಕರಣೆಗಳನ್ನು ಹೊಸ ತಾಂತ್ರಿಕ ಕಟ್ಟಡಕ್ಕೆ ವರ್ಗಾಯಿಸಿ ಪ್ರಾಯೋಗಿಕವಾಗಿ ಕಾರ್ಯಾರಂಭಿಸಲಾಗಿದೆ. ಈ ನಿಯಂತ್ರಣ ಗೋಪುರ ಹಾಗೂ ಕಂಟ್ರೋಲ್ ಸರ್ವೀಸ್ ವಿಮಾನ ನಿಲ್ದಾಣ ವ್ಯಾಪ್ತಿಯ 250 ನಾಟಿಕಲ್ ಮೈಲು ದೂರದಲ್ಲಿ ಸುರಕ್ಷಿತ ವಾಯು ಸಂಚಾರಕ್ಕೆ ಸೂಚನೆ ನೀಡುವ ಸಾಮರ್ಥ್ಯ ಹೊಂದಿದೆ.

ನೂತನ ವ್ಯವಸ್ಥೆ ಮಂಗಳೂರು ವಿಮಾನ ನಿಲ್ದಾಣದಿಂದ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳ ಬಗ್ಗೆ ನಿಗಾ ವಹಿಸಲು ಸಹಕಾರಿಯಾಗಲಿದೆ. ಈ ಏರ್ ಕಂಟ್ರೋಲ್ ಸೆಂಟರ್ 24X7 ಕಾರ್ಯನಿರ್ವಹಿಸಲಿದೆ. ನೂತನ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಿಂದ ವಿಮಾನ ಹಾರಾಟದ ವ್ಯವಸ್ಥೆಯ ಸುರಕ್ಷತೆಯ ವ್ಯವಸ್ಥೆ ವೃದ್ಧಿಗೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.