- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭಾವೈಕ್ಯದ ದೀಪಾವಳಿ ಆಚರಣೆ: ವಿಹಿಂಪ ಮತ್ತು ವಿವಿಧ ಹಿಂದೂ ಸಂಘಟನೆಗಳ ವಿರೋಧ

kadri-temple [1]ಮಂಗಳೂರು: ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ನೇತೃತ್ವದಲ್ಲಿ ಅ. 29ರಂದು ಭಾವೈಕ್ಯದ ದೀಪಾವಳಿ ಆಚರಣೆಯನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಡೆಸುವುದಕ್ಕೆ ವಿಹಿಂಪ ಮತ್ತು ವಿವಿಧ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಹಿಂದೂ ಧಾರ್ಮಿಕ ದತ್ತಿ ಕಾನೂನಿನ ಪ್ರಕಾರ ಅನ್ಯ ಮತೀಯರು ಹಿಂದೂ ದೇವಾಲಯಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶ ಇರುವುಧಿದಿಲ್ಲ. ಹಿಂದೂಯೇತರರು ಕಾರ್ಯಕ್ರಮ ನಡೆಸುವುದರಿಂದ ದೇವಸ್ಥಾನದ ಆಚಾರ ವಿಚಾರಗಳಿಗೆ ಚ್ಯುತಿ ಬರುತ್ತದೆ ಮತ್ತು ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ಐವನ್‌ ಡಿ’ಸೋಜಾ ಅವರು ಹಮ್ಮಿಕೊಂಡಿರುವ ಭಾವೈಕ್ಯದ ದೀಪಾವಳಿಯನ್ನು ಸಂಘ ಪರಿವಾರ ವಿರೋಧಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇಗುಲವಾಗಿದೆ. ಹಿಂದೂ ಧಾರ್ಮಿಕ ಕೇಂದ್ರಗಳು ಹಿಂದೂಗಳಿಗೆ ಮಾತ್ರ ಸೀಮಿತವಾಗಿವೆ. ಐವನ್‌ ಡಿ’ಸೋಜಾ ಕ್ರೈಸ್ತ ಧರ್ಮದವರಾಗಿದ್ದು, ಅವರು ಈ ದೇವಸ್ಥಾನದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಆದ್ದರಿಂದ ಅವರಿಗೆ ಇಲ್ಲಿ ದೀಪಾವಳಿ ಆಚರಣೆ ಮಾಡಲು ಬಿಡುವುದಿಲ್ಲ. ಒಂದೊಮ್ಮೆ ಐವನ್‌ ಡಿ’ಸೋಜಾ ಹಿಂದೂ ಧರ್ಮಕ್ಕೆ ಮತಾಂತರಧಿಗೊಂಡು ಬಂದರೆ ಕಾರ್ಯಕ್ರಮಕ್ಕೆ ಅವಕಾಶ ಕೊಡಬಹುದು ಎಂದು ವಿವರಿಸಿದರು.

ಭಾವೈಕ್ಯದ ದೀಪಾವಳಿ ಕಾರ್ಯಕ್ರಮ ತಡೆ ಹಿಡಿಯುವಂತೆ ಡಿಸಿ, ಪೊಲೀಸರಿಗೆ, ದೇಗುಲದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಕೂಲಂಕಷ ತನಿಖೆ ನಡೆಸಿ ಇದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಜರಗಿಸಬೇಕೆಂದು ಅವರು ಆಗ್ರಹಿಸಿದರು. ಹಿಂದೂ ಸಂಘಟನೆಗಳ ವಿರೋಧ ಲೆಕ್ಕಿಸದೆ ಕಾರ್ಯಕ್ರಮ ನಡೆಸಲು ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ, ಬಜರಂಗದಳದ ಪ್ರಾಂತ ಸಂಯೋಜಕ ಶರಣ್‌ ಪಂಪ್‌ವೆಲ್‌, ಮುಖಂಡರಾದ ಭರತ್‌ ಶೆಟ್ಟಿ, ಕಿಶೋರ್‌, ಹರೀಶ್‌ ಪೂಂಜಾ ಭುಜಂಗ ಕುಲಾಲ್‌ ಮೊದಲಾದವರು ಉಪಸ್ಥಿತರಿದ್ದರು.