- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಕ್ರಮ ಗೋಸಾಗಾಟಗಾರರಿಂದದ ಪೊಲೀಸರ ಕೊಲೆಗೆ ಯತ್ನ: ಆರೋಪಿಗಳು ಪರಾರಿ

trafficking cattle [1]ಮೂಡಬಿದಿರೆ: ಪಡು ಕೊಣಾಜೆಯ ಮೇಕಾರು ಬಳಿ ಅಕ್ರಮ ಗೋಸಾಗಾಟಗಾರರು ಪೊಲೀಸರ ಮೇಲೆ ಕಾರು ಹಾಯಿಸಿ, ಕೊಲೆಗೆ ಯತ್ನಿಸಿದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಅನಿವಾರ್ಯವಾಗಿ ಪೊಲೀಸರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಕ್ವಾಲಿಸ್‌ ಜೀಪು, 7 ದನಗಳು ಮತ್ತು ಕ್ವಾಲಿಸ್‌ನಲ್ಲಿದ್ದ ಆರೋಪಿಗಳು ಬಳಸಿರುವ ಕೈಗವಸು, ಎರಡು ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಮಾರ್ಗವಾಗಿ ಶಿರ್ತಾಡಿ ಕಡೆಗೆ ವಾಹನದಲ್ಲಿ ಅಕ್ರಮ ಗೋಸಾಗಾಟ ಮಾಡುವ ಖಚಿತ ಮಾಹಿತಿಯ ಪ್ರಕಾರ ಮೂಡಬಿದಿರೆಯ ಇನ್ಸ್‌ಪೆಕ್ಟರ್‌ ರಾಮಚಂದ್ರ ನಾಯಕ್‌ ಹಾಗೂ ಮೂವರು ಸಿಬಂದಿ ಪಡುಕೊಣಾಜೆ ಕ್ರಾಸ್‌ ಬಳಿ ಗುರುವಾರ ಮುಂಜಾನೆ 4 ಗಂಟೆ ವೇಳೆಗೆ ವಾಹನ ತಪಾಸಣೆ ನಡೆಸಿದ್ದರು.

ಕ್ವಾಲಿಸ್‌ನಲ್ಲಿ ಗೋ ಸಾಗಾಟ ಮಾಡುತ್ತಿದ್ದ ಆರೋಪಿಗಳು ಪಡುಕೊಣಾಜೆ ಬಳಿ ಪೊಲೀಸರನ್ನು ಗಮನಿಸಿ, ಅಲ್ಲಿಂದ ಪರಾರಿ ಯಾಗಲು ಯತ್ನಿಸಿದರು. ಮಾರೂರು ಕ್ರಾಸ್‌ ಬಳಿ ಎಸ್‌ಐ ದೇಜಪ್ಪ ಹಾಗೂ ಇಬ್ಬರು ಪೊಲೀಸ್‌ ಸಿಬಂದಿ ವಾಹನ ತಪಾಸಣೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿಗಳು ಮತ್ತೆ ಪಡುಕೊಣಾಜೆ ಕ್ರಾಸ್‌ನತ್ತ ತೆರಳಿದರು. ಇನ್ಸ್‌ಪೆಕ್ಟರ್‌ ನಾಯಕ್‌ ಅವರು ಪೊಲೀಸ್‌ ವಾಹನದ ಮೂಲಕ ಅಡಗಟ್ಟಲು ಪ್ರಯತ್ನಿಸಿದರು.

ಈ ವೇಳೆ ಕ್ವಾಲಿಸ್‌ನಲ್ಲಿದ್ದ ಆರೋಪಿಗಳು ಪೊಲೀಸರ ಮೇಲೆ ಜೀಪು ಹಾಯಿಸಲು ಪ್ರಯತ್ನಿಸಿದಾಗ ಪೊಲೀಸರು ಪಕ್ಕದಲ್ಲಿರುವ ಚರಂಡಿಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಅಲ್ಲಿಂದ ಪರಾರಿಯಾಗಲು ಯತ್ನಿಸಿ ಆರೋಪಿಗಳು ತುಸು ದೂರ ಹೋಗುತ್ತಿದ್ದಂತೆ ಇನ್ಸ್‌ ಪೆಕ್ಟರ್‌ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು.

ಈ ವೇಳೆ ಆರೋಪಿಗಳು ಕ್ವಾಲಿಸ್‌ನಿಂದ ಇಳಿದು, ಪಕ್ಕದಲ್ಲಿದ್ದ ಗದ್ದೆ ಮೂಲಕ ಪರಾರಿಯಾಗಿದ್ದಾರೆ. ಪೊಲೀಸರು ಘಟನೆಯ ವೇಳೆ ಆರೋಪಿಗಳ ಚಹರೆಯನ್ನು ಸ್ಪಷ್ಟವಾಗಿ ಗಮನಿಸಿದ್ದಾರೆ. ಪೊಲೀಸ್‌ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಕೊಲೆ ಯತ್ನ, ಕರ್ನಾಟಕ ಗೋ ಹತ್ಯೆ ಕಾಯ್ದೆ, ಪ್ರಾಣಿ ಹಿಂಸೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.