ಮಂಗಳೂರು: ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ ಠಾಣಾ ವಾಪ್ತಿಯಲ್ಲಿ ವಿಧಿಸಲಾಗಿದ್ದ ಸೆಕ್ಷನ್ 144 ನಿಷೇಧಾಜ್ಞೆಯನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಸ್ತರಿಸಿರಲಾಗಿದೆ.
ಅಲ್ಲದೆ ಈ ಪ್ರಕರಣಗಳನ್ನು ಬೇಧಿಸಲು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನವೆಂಬರ್ 13ರ ಮಧ್ಯಾಹ್ನ 2 ಗಂಟೆಯಿಂದ ನವೆಂಬರ್ 16ರ ರಾತ್ರಿ 10 ಗಂಟೆಯ ವರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆ. 144 ನಿಷೇಧಾಜ್ಞೆ ಜಾರಿಗೊಳ್ಳಲಿದೆ. ನವೆಂಬರ್ 10 ಮತ್ತು 12ರಂದು ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೂರಿ ಇರಿತ ನಡೆದಿದ್ದುರಿಂದ ಈ ಎರಡೂ ಠಾಣಾ ವ್ಯಾಪ್ತಿಗಳಲ್ಲಿ ಶನಿವಾರ ರಾತ್ರಿಯಿಂದಲೇ ನಿಷೇಧಾಜ್ಞೆ ಆದೇಶ ನೀಡಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಮುನ್ನಚ್ಚರಿಕಾ ಕ್ರಮವಾಗಿ ಈ ನಿಷೇಧಾಜ್ಞೆ ವಿಧಿಸಲಾಗಿದೆ ಎಂದರು.
ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಎರಡು ವಿಶೇಷ ತಂಡ ಮತ್ತು ಕೊಣಾಜೆ ಠಾಣೆ ವಾಪ್ತಿಯಲ್ಲಿ ಎರಡು ವಿಶೇಷ ತಂಡಗಳು ನಿಷ್ಪಕ್ಷಪಾತ ತನಿಖೆ ನಡೆಸುತ್ತಿವೆ. ಪದೇ ಪದೇ ಇಂತಹ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಸೂಕ್ಷ್ಮ ಪ್ರದೇಶದ ಸಹಿತ ವಿವಿಧ ಪ್ರದೇಶಗಳಿಗೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.
ನಿಷೇಧಾಜ್ಞೆ ಆದೇಶದ ಅನ್ವಯ ಸಾರ್ವಜನಿಕ ಸಭೆ, ಮೆರವಣಿಗೆ, ಪ್ರತಿಭಟನೆಗಳು ಸಹಿತ ಜನರು ಗುಂಪು ಸೇರುವುದಕ್ಕೆ ಅವಕಾಶಗಳಿಲ್ಲ. ಆಯುಧಗಳನ್ನು ಹೊಂದುವುದು, ಕರಪತ್ರಗಳನ್ನು ಹಂಚುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಶಾಂತಿಗೆ ಭಂಗ ತರುವ ಬರಹಗಳನ್ನು ಹಾಕುವವರ ಮೇಲೆ ನಿಗಾ ವಹಿಸಲಾಗಿದೆ. ಆದರೆ, ಮದುವೆ ಸಮಾರಂಭ, ಎಟಿಎಂಗಳಲ್ಲಿ ಸರದಿ ಸಾಲು ನಿಲ್ಲಲು ನಿಷೇಧಾಜ್ಞೆ ಅಡ್ಡಿಯಾಗದು. ಜನರಿಗೆ ತೊಂದರೆಯಾಗದಂತೆ ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.
Click this button or press Ctrl+G to toggle between Kannada and English