- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನೋಟು ಬದಲಾವಣೆಗೆ ಆಗಮಿಸುವ ಜನರಿಗೆ 2 ದಿನಗಳ ಕಾಲ ಉಚಿತ ಪ್ರಯಾಣ: ಅಟೋ ಚಾಲಕ ಸಾಧಿಕ್

Sadiq Puttur [1]ಪುತ್ತೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿರುವ 500 ಹಾಗೂ 1000 ರೂಪಾಯಿ ನೋಟು ಹಿಂತೆಗೆತದ ಬಳಿಕ ನೋಟು ಬದಲಾವಣೆಗೆ ಆಗಮಿಸುವ ಜನರಿಗೆ 2 ದಿನಗಳ ಕಾಲ ಉಚಿತ ಪ್ರಯಾಣಕ್ಕೆ ಮುಂದಾಗಿದ್ದಾರೆ ಪುತ್ತೂರಿನ ಅಟೋ ಚಾಲಕ ಸಾಧಿಕ್.

ಈತ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪ ನಿವಾಸಿ. ಈಗ ಪುತ್ತೂರಿನಲ್ಲಿ ಅವರು ನಿಜವಾದ ಹೀರೋ. ದೈನಂದಿನ ಬದುಕಿಗೆ ದುಡಿದೇ ತಿನ್ನುವ ಇವರು, ಈಗ ಎರಡು ದಿನಗಳ ಕಾಲ ಉಚಿತ ಪ್ರಯಾಣಕ್ಕೆ ಮುಂದಾಗಿದ್ದಾರೆ. ಕಾರಣ ಇಷ್ಟೇ ನರೇಂದ್ರ ಮೋದಿ ಅವರಿಗೆ ಬೆಂಬಲ.

ನೋಟು ಬದಲಾಯಿಸಲು ಗ್ರಾಮೀಣ ಭಾಗದಿಂದ ಬ್ಯಾಂಕ್‌ಗೆ ಬರುವ ಮಂದಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದಾರೆ. ಮಂಗಳವಾರ ಬೆಳಗ್ಗಿನಿಂದ ಬುಧವಾರ ಸಂಜೆಯವರೆಗೆ ಉಚಿತ ಪ್ರಯಾಣ ನೀಡುವುದಾಗಿ ಹೇಳಿದ್ದಾರೆ. ಪುತ್ತೂರು ತಾಲೂಕಿನ ನೈತಾಡಿ, ಪಂಜಳ, ಮುಂಡೂರು ನಿವಾಸಿಗಳಿಗೆ ಈ ಅವಕಾಶ ಸಿಕ್ಕಿದೆ. ಇದರಿಂದ ತನಗೇನು ಲಾಭವಿಲ್ಲ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಈ ನಿರ್ಧಾರ ಎಲ್ಲರಿಗೂ ಅನುಕೂಲವೇ ಆಗಿದೆ. ಆರಂಭದ ಈ ವಾರದ ಸಮಸ್ಯೆಯಾಗಬಹುದು. ಬಡವರು ಕೆಲಹೊತ್ತು ಬ್ಯಾಂಕ್ ಮುಂದೆ ನಿಲ್ಲಬೇಕಾಗಬಹುದು.

ಆದರೆ ಇದು ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರ ಎಂದು ಹೇಳುವ ಸಾಧಿಕ್, ನಾನು ಈ ದೇಶಕ್ಕೆ ಹಾಗೂ ಪ್ರಧಾನಿ ಮೋದಿ ನಿರ್ಧಾರಕ್ಕೆ ಈ ರೀತಿಯಿಂದ ಸಹಾಯ ಮಾಡಬಹುದು ಎಂದು ಅನಿಸಿದ್ದರಿಂದ ಈ ರೀತಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದೇನೆ ಎನ್ನುತ್ತಾರೆ.

ಬಡವರಿಗೆ ಈಗ ಕಷ್ಟವಾದರೂ ಸಹಿಸಿಕೊಳ್ಳಬೇಕು. ಏಕೆಂದರೆ ಬಸ್ಸಿಗಾಗಿ, ಅಟೋಗಾಗಿ, ಮತ್ಯಾವುದೋ ಸಂಗತಿಗಳಿಗಾಗಿ ಗಂಟೆಗಟ್ಟಲೆ ಕಾಯುವುದಿಲ್ಲವೇ? ಈಗ ದೇಶಕ್ಕಾಗಿ ಕೆಲಹೊತ್ತು ಬಡವರೇ ಕಾಯಬೇಕು ಎಂದು ಹೇಳುತ್ತಾರೆ ಸಾಧಿಕ್. ಅಟೋ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇರುವ ಬ್ಯಾನರ್ ಕೂಡಾ ಅಳವಡಿಕೆ ಮಾಡಿದ್ದಾರೆ.