- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವೈಯಕ್ತಿಕ ಕಾರಣಗಳಿಂದಲೇ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ

D K Ravi [1]ಬೆಂಗಳೂರು: ಇಪ್ಪತ್ತು ತಿಂಗಳ ಹಿಂದೆ ರಾಷ್ಟ್ರ ಮಟ್ಟದಲ್ಲಿ ಬಹುಚರ್ಚಿತವಾಗಿದ್ದ ಐಎಎಸ್‌ ಅಧಿಕಾರಿ ಡಿ.ಕೆ. ರವಿ ನಿಗೂಢ ಸಾವಿನ ಬಗ್ಗೆ ಸುದೀರ್ಘಾವಧಿಯ ತನಿಖೆ ಮುಗಿಸಿರುವ ಕೇಂದ್ರ ತನಿಖಾ ದಳ (ಸಿಬಿಐ), ವೈಯಕ್ತಿಕ ಕಾರಣಗಳಿಂದಲೇ ಐಎಎಸ್‌ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಐಎಎಸ್‌ ಅಧಿಕಾರಿ ಸಾವಿನ ಕುರಿತು ಬೆಂಗಳೂರು ದಕ್ಷಿಣ ವಲಯ ಉಪ ವಿಭಾಗಾಧಿಕಾರಿ ಡಿ.ಬಿ. ನಟೇಶ್‌ಗೆ ಸೋಮವಾರ 90 ಪುಟಗಳ ಅಂತಿಮ ವರದಿ ಸಿಬಿಐ ಅಧಿಕಾರಿಗಳಿಂದ ಸಲ್ಲಿಕೆಯಾಗಿದ್ದು, ಇದರಲ್ಲಿ ತೀರಾ ವೈಯಕ್ತಿಕ ಕಾರಣಗಳಿಂದಾಗಿ ಬೇಸರಗೊಂಡು ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖೀಸಿರುವುದಾಗಿ ತಿಳಿದು ಬಂದಿದೆ.

ಇದರೊಂದಿಗೆ ಹಲವು ತಿಂಗಳುಗಳಿಂದ ಸಾರ್ವಜನಿಕ ವಲಯದಲ್ಲಿ ರಾಜ್ಯದ ಯುವ ಐಎಎಸ್‌ ಅಧಿಕಾರಿ ರವಿ ಸಾವಿನ ಕುರಿತು ಎದ್ದಿದ್ದ ಅನುಮಾನಾಸ್ಪದ ಪ್ರಶ್ನೆಗಳಿಗೆ ತೆರೆ ಬಿದ್ದಂತಾ ಗಿದೆ. ಆದರೆ, ತನಿಖಾ ವರದಿ ಸಲ್ಲಿಕೆ ಯಾಗಿರುವುದನ್ನು ಉಪವಿಭಾಗಾಧಿ ಕಾರಿಗಳು ಅಧಿಕೃತವಾಗಿ ತಿಳಿಸಿಲ್ಲ.

ಈ ವರದಿ ಸಲ್ಲಿಕೆ ಬೆನ್ನಲ್ಲೇ ಗುರುವಾರ ಸಂಜೆ ಜಿಲ್ಲಾಧಿಕಾರಿ ವಿ. ಶಂಕರ್‌ ಅವರನ್ನು ಉಪವಿಭಾಗಾಧಿಕಾರಿ (ಎ.ಸಿ.) ನಟೇಶ್‌ ಭೇಟಿಯಾಗಿ ಪ್ರಕರಣದ ವರದಿ ಕುರಿತು ವಿವರಣೆ ನೀಡಿದ್ದಾರೆ. ಅಲ್ಲದೆ ಮುಂದಿನ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಜಿಲ್ಲಾಧಿಕಾರಿ, ಡಿ.ಕೆ. ರವಿ ಸಾವಿನ ಕುರಿತು ಸಿಬಿಐ ಕೊಟ್ಟಿರುವ ವರದಿಯ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಡಿ.ಕೆ.ರವಿ ಅವರಿಗೆ ತಮ್ಮ ಐಎಎಸ್‌ ಬ್ಯಾಚ್‌ಮೇಟ್‌ ಮಹಿಳಾ ಅಧಿಕಾರಿ ಜತೆ ಉಂಟಾಗಿದ್ದ ಮನಸ್ತಾಪ, ಕೌಟುಂಬಿಕ ವಿಚಾರ ಸೇರಿದಂತೆ ಹಲವು ವೈಯಕ್ತಿಕ ವಿಷಯಗಳ ಬಗ್ಗೆ ಸಿಬಿಐ ವರದಿಯಲ್ಲಿ ಉಲ್ಲೇಖವಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇದಕ್ಕೆ ಪೂರಕ ಸಾಕ್ಷ್ಯವಾಗಿ ಮೃತ ಅಧಿಕಾರಿಯ ಮೊಬೈಲ್‌ ಕರೆಗಳ ವಿವರ (ಸಿಡಿಆರ್‌), ಇ-ಮೇಲ್‌, ವ್ಯಾಟ್ಸ್‌ ಆ್ಯಪ್‌ ಮತ್ತು ಎಸ್‌ಎಂಎಸ್‌ ಸಂದೇಶಗಳ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಅಭಿಪ್ರಾಯವನ್ನು ಲಗತ್ತಿಸಿದ್ದಾರೆ. ಹಾಗೆಯೇ ರವಿ ಪತ್ನಿ ಕುಸುಮಾ, ತಾಯಿ ಗೌರಮ್ಮ, ಮಾವ ಹನುಮಂತರಾಯಪ್ಪ ಸೇರಿ ಕುಟುಂಬದ ಸದಸ್ಯರು, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಮತ್ತು ಸಿಬಂದಿಯ ಹೇಳಿಕೆ ಸಹ ದಾಖಲಿಸಿದ್ದಾರೆ.

ಅಲ್ಲದೆ ಕೋಲಾರ ಜಿಲ್ಲಾಧಿಕಾರಿ ಹುದ್ದೆಯಿಂದ ರವಿ ಅವರ ವರ್ಗಾವಣೆಗೆ ಕಾರಣವಾಗಿದ್ದರು ಎಂಬ ಆರೋಪ ಎದುರಿಸುತ್ತಿದ್ದ ಕಾರಣಕ್ಕೆ ಕೋಲಾರ ಸಂಸದ ಕೆ.ಎಚ್‌. ಮುನಿಯಪ್ಪ, ಶಾಸಕರಾದ ವರ್ತೂರು ಪ್ರಕಾಶ್‌, ಕೊತ್ತನೂರು ಮಂಜುನಾಥ್‌ ಹಾಗೂ ಬಂಗಾರಪೇಟೆ ನಾರಾಯಣ ಸ್ವಾಮಿ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿತ್ತು. ಹೀಗಾಗಿ ಆ ಚುನಾಯಿತ ಪ್ರತಿನಿಧಿಗಳ ಹೇಳಿಕೆಗಳು ಕೂಡ ಅಂತಿಮ ವರದಿಯಲ್ಲಿ ದಾಖಲಾಗಿವೆೆ ಎಂದು ಮೂಲಗಳು ಮಾಹಿತಿ ನೀಡಿವೆ.