ಮಂಗಳೂರು: ಚಿಟ್ ಫಂಡ್ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಟ್ಲ ಕಸಬ ಗ್ರಾಮದ ಸೇರಾಜೆ ನಿವಾಸಿ ಪುರಂದರ (26) ಎಂಬಾತನೇ ವಂಚನೆ ಪ್ರಕರಣದಲ್ಲಿ ಪೊಲೀಸರ ವಶವಾದ ವ್ಯಕ್ತಿ. ವಿಟ್ಲದ ಬೊಬ್ಬೆಕೇರಿಯಲ್ಲಿ ಊಟದ ಹೊಟೇಲ್ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಪುರಂದರ್ ಈ ಚಿಟ್ ಫಂಡ್ ಪ್ರಾರಂಭಿಸಿದ್ದರು. ಚಿಟ್ ಫಂಡ್‌ನಲ್ಲಿ 35 ಜನರು ಸೇರಿಕೊಂಡು ಕಳೆದ ಐದು ವರ್ಷದಿಂದ ನಡೆಸುತ್ತ ಬಂದಿದ್ದರು. ಆದರೆ ಸದ್ಯ ಈ ಚೀಟ್ ಫಂಡ್‌ನಿಂದ ಕೆಲವರು ಹಣ ಸಿಗದೆ ವಂಚನೆಗೊಳಗಾಗಿದ್ದರು. ಪುರಂದರ ಹಣ ನೀಡದ ಹಿನ್ನೆಲೆಯಲ್ಲಿ ವಿಟ್ಲ ಠಾಣೆಯಲ್ಲಿ ಮೌಖಿಕ ದೂರು ನೀಡಲಾಗಿತ್ತು.
ದೂರು ದಾಖಲಿಸಿಕೊಂಡ ಪೊಲೀಸರು ಪುರಂದರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಲೆಕ್ಕ ಹಾಕುವಾಗ ಸುಮಾರು ಮೂರು ಕೋಟಿಗೂ ಮಿಕ್ಕಿ ವಂಚಿಸಿರುವುದು ಬಹಿರಂಗವಾಗಿದೆ. ಈತ ಠಾಣೆಗೆ ಬಂದಿರುವ ವಿಚಾರ ತಿಳಿದ ವಂಚನೆಗೊಳಗಾದ ಹಲವರು ಠಾಣಾ ಮುಂದೆ ಜಮಾಯಿಸಿದ್ದರು. ಈತನಿಂದ ವಂಚನೆಗೊಳಗಾದ ಸ್ಥಳೀಯ ನಿವಾಸಿ ಮೋನಪ್ಪ ನೀಡಿದ ದೂರಿನಂತೆ ಪುರಂದರ ಹಾಗೂ ಆತನಿಗೆ ಸಹಾಯ ಮಾಡಿದ ಲಕ್ಷ್ಮಣರವರ ವಿರುದ್ಧ ವಿಟ್ಲ ಠಾಣಾ ಪೊಲೀಸರು ಮೋಸ, ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರಂಭದಲ್ಲಿ ಉತ್ತಮ ರೀತಿಯಲ್ಲಿ ವಹಿವಾಟು ನಡೆಸುತ್ತಿದ್ದ ಪುರಂದರ ಅಲ್ಲಿನ ಜನರ ವಿಶ್ವಾಸಗಳಿಸಿದ್ದ. ಬಳಿಕ ವಹಿವಾಟು ಹೆಚ್ಚಾಗಿ ಕುರಿ ತೆಗೆದವರಿಗೆ ಸ್ವಲ್ಪ ಸ್ವಲ್ಪವೇ ಹಣ ನೀಡುತ್ತಿದ್ದವರು ಚೆಕ್ ನೀಡಲು ಆರಂಭಿಸಿದ್ದಾರೆ. ಆದರೆ ಅವರು ನೀಡುತ್ತಿದ್ದ ಚೆಕ್‌ಗಳೆಲ್ಲವೂ ಬೌನ್ಸ್ ಆಗಿವೆ ಎಂದು ಹಣ ಕಳೆದುಕೊಂಡವರು ತಿಳಿಸಿದ್ದಾರೆ.
Click this button or press Ctrl+G to toggle between Kannada and English