- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಿಐಡಿ ನಿಷ್ಪಕ್ಷಪಾತ ತನಿಖೆ ನಡೆಸುವ ಬಗ್ಗೆ ವಿಶ್ವಾಸ ಇದೆ: ಉಮಾಶ್ರೀ

Umashree [1]ಮಂಗಳೂರು: ರಾಸಲೀಲೆ ಸಿ.ಡಿ. ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಹೆಚ್‌.ವೈ. ಮೇಟಿ ವಿರುದ್ಧ ಈಗಾಗಲೇ ಸಿಐಡಿ ತನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ನಮಗೆ ಸಿಐಡಿ ನಿಷ್ಪಕ್ಷಪಾತ ತನಿಖೆ ನಡೆಸುವ ಬಗ್ಗೆ ವಿಶ್ವಾಸ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಮಂಗಳೂರಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಐಡಿ ವರದಿಯ ಆಧಾರದಲ್ಲಿ ಮುಖ್ಯಮಂತ್ರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಆ ಸಿ.ಡಿ.ಯಲ್ಲಿ ಇರುವುದು ನಾನಲ್ಲ ಎಂದು ಮೇಟಿ ಹೇಳಿದ್ದಾರೆ. ತನಿಖಾ ವರದಿ ಬರಲಿ. ಸತ್ಯಾಂಶ ಹೊರಬರಲಿದೆ. ಉದ್ದೇಶ ಈಡೇರಿಸಿಕೊಳ್ಳಲು ಮಹಿಳೆಯರನ್ನು ಈ ರೀತಿ ಬಳಸಿಕೊಳ್ಳುವುದು ಸರಿಯಲ್ಲ. ಮಹಿಳೆಯರ ಅಸಹಾಯಕತೆಯನ್ನು ಪುರುಷರು ದುರ್ಬಳಕೆ ಮಾಡಬಾರದು ಎಂದರು.

ಇನ್ನು ಅಸೌಖ್ಯರಾಗಿದ್ದ ಕಾರಣ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಲು ಹಾಜರಾಗದ ಹಿರಿಯ ನಾಟ್ಯ ಗುರು ಕೆ.ಮುರಳೀಧರ ರಾವ್ ಅವರಿಗೆ ಮಂಗಳೂರಿನಲ್ಲಿಯೇ ಸಚಿವೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.

ನಗರದ ಸನಾತನ ನಾಟ್ಯಾಲಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಕಲೆಯನ್ನು ಕಲಿಯುವುದು ಸುಲಭದ ಮಾತಲ್ಲ. ಹಿರಿಯ ಕಲಾವಿದರಿಗೆ ಇಂತಹ ಪ್ರಶಸ್ತಿಗಳು ಸಿಕ್ಕಿದಾಗ, ಅದು ಯುವ ಕಲಾವಿದರಿಗೆ ಮಾರ್ಗದರ್ಶನವಾಗಬೇಕೆಂದರು.

ಹಿರಿಯ ಸಂಶೋಧಕ ಪ್ರೊ. ಎ.ವಿ. ನಾವಡ, ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಕರ್ನಾಟಕ ಕಲಾಶ್ರೀ ಪುರಸ್ಕೃತ ಹಿರಿಯ ನೃತ್ಯಗುರು ಉಳ್ಳಾಲ ಮೋಹನ ಕುಮಾರ್, ಕರ್ನಾಟಕ ನೃತ್ಯಕಲಾ ಅಕಾಡೆಮಿ ಅಧ್ಯಕ್ಷ ಕಮಲಾಕ್ಷ ಆಚಾರ್ಯ, ವಿದುಷಿ ಶಾರದಾ ಮಣಿಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತ ರಾವ್ ಪಾಟೀಲ್ ಇದ್ದರು.