- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತಾಲೂಕು ಕಚೇರಿಯ ಕಂದಾಯ ಇಲಾಖೆಯ ಕೆಲಸಗಳಲ್ಲಿ ವಿಳಂಬ, ಸೂಕ್ತ ಕ್ರಮಕ್ಕೆ ಆಗ್ರಹ

tp meeting [1]ಮಂಗಳೂರು : ಮಂಗಳೂರು ತಾಲೂಕು ಕಚೇರಿಯ ಕಂದಾಯ ಇಲಾಖೆಯ ಕೆಲಸಗಳಲ್ಲಿ ವಿಳಂಬವಾಗುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಬಗ್ಗೆ ತಾಲೂಕು ಪಂಚಾಯತ್ ಸಭೆಯಲ್ಲಿ ಸದಸ್ಯರು ಅತೃಪ್ತಿ ಮತ್ತು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ತಹಶೀಲ್ದಾರರ ನೇತೃತ್ವದಲ್ಲಿ ವಿಶೇಷ ಸಭೆ ಕರೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.

ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆರಂಭಗೊಂಡ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಅವರು ಮಾತನಾಡುತ್ತಿದ್ದರು.

ಈ ಹಿಂದಿನ ತಾಲೂಕು ಪಂಚಾಯತ್ ಸಭೆಯಲ್ಲಿ ಹೆಚ್ಚಿನ ಚರ್ಚೆಗಳು ಕಂದಾಯ ಇಲಾಖೆಗೆ ಸಂಬಂಧಿಸಿರುವ ಹಿನ್ನೆಲೆಯಲ್ಲಿ ಅವರನ್ನು ಸಭೆಗೆ ಬರುವಂತೆ ಸೂಚಿಸಿದ್ದರೂ ಅವರು ಇಂದು ರಜೆ ಹಾಕಿದ್ದಾರೆ. ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ವಿಳಂಬವಾಗಿ ಕೆಲಸಗಳು ಮಂಗಳೂರು ಕಂದಾಯ ಇಲಾಖೆಯಲ್ಲಿ ನಡೆಯುತ್ತಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ ಅಧ್ಯಕ್ಷರು ಸದಸ್ಯರ ಆಗ್ರಹದ ಮೇರೆಗೆ ಸಭೆಯ ನಡುವೆ ತಹಶೀಲ್ದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಭೆಗೆ ಬರುವಂತೆ ಮಾಡಲು ಪ್ರಯತ್ನಿಸಿದರು. ಜನಸಮಾನ್ಯರ ಸಮಸ್ಯೆ ಹತ್ತು ದಿನಗಳಲ್ಲಿ ಆಗಬೇಕಾದ ಕೆಲಸ ಒಂದು ತಿಂಳಾದರೂ ಆಗುತ್ತಿಲ್ಲ .ತಾಲೂಕು ಮಟ್ಟದ ಅಧಿಕಾರಿಗಳು ಬರಬೇಕಾದ ಸಭೆಗೂ ಭಾಗವಹಿಸದಿದ್ದರೆ ಜನ ಪ್ರತಿನಿಧಿಗಳ ಪಾತ್ರ ಏನು ? ಎಂದು ತಾಲೂಕು ಪಂಚಾಯತ್ ಸದಸ್ಯ ಶಶಿಕಲಾ ಶೆಟ್ಟಿ ಆರೋಪಿಸಿದರು. ಸಮಸ್ಯೆಗಳಿಗೆ ಉತ್ತರಿಸಬೇಕಾದ ಅಧಿಕಾರಿಗಳು ಸಭೆಗೆ ಹಾಜರಾಗದೆ ತಾಲೂಕು ಪಂಚಾಯತ್ ಸದಸ್ಯರನ್ನು ಕಡೆಗಣಿಸಿದರೆ ನಾವು ಸಭೆಯಲ್ಲಿ ಏಕೆ ಭಾಗವಹಿಸಬೇಕು ಎಂದು ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಸಾಮಾನ್ಯ ಸಭೆ ಎರಡು ತಿಂಗಳಿಗೊಮ್ಮೆ ನಡೆಯುವುದರಿಂದ ಜನರ ಸಮಸ್ಯೆ ಬಗೆಹರಿಸಲು ತಹಶೀಲ್ದಾರರು ಹಾಗೂ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳ ವಿಶೇಷ ಸಭೆಯನ್ನು ಅಗತ್ಯವಿದ್ದರೆ ಕರೆಸುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿದರು.

tp meeting [2]‘‘ಗ್ರಾಮ ಪಂಚಾಯತ್‌ಗಳಲ್ಲಿ ಈ ಬಾರಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಆದರೆ ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷವೂ ಟ್ಯಾಂಕರ್ ಮೂಲಕ ನೀರು ಪೂರೈಸಿದ ಬಿಲ್ಲುಗಳು ಇನ್ನೂ ಪಾವತಿಯಾಗಿಲ್ಲ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಣ ಬಿಡುಗಡೆಯಾಗಿದೆ ಎನ್ನುವ ವರದಿ ಮಾತ್ರ ಹೀಗಾದರೆ ಗ್ರಾಮ ಪಂಚಾಯತ್‌ನವರು ಏನು ಮಾಡಬೇಕು ’’ಎಂದು ಸದಸ್ಯ ಶ್ರೀಧರ ಆರೋಪಿಸಿದರು. ಹಿಂದಿನ ಬಾಕಿ ಪಾವತಿಗೆ ಕ್ರಮ ಕೈ ಗೊಳ್ಳುವುದಾಗಿ ಅಧ್ಯಕ್ಷರು ತಿಳಿಸಿದರು.

ಮಂಗಳೂರು ತಾಲೂಕಿನ ರಂತಡ್ಕ ಮತ್ತು ನೀರೋಲ್ಪೆ ಅಂಗನವಾಡಿಗಳ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದ್ದು ಅದನ್ನು ತಕ್ಷಣ ಪೂರ್ಣಗೊಳಿಸಲು ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಜಬ್ಬಾರ್ ತಿಳಿಸಿದರು. ಕಾಮಗಾರಿಗೆ ಬಾಕಿ ಇರುವ ಅನುದಾನ ಬಿಡುಗಡೆಯಾಗಿದೆ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸುವುದಾಗಿ ಕಾರ್ಯನಿರ್ವಾಹಣಾಧಿಕಾರಿ ಸದಾನಂದ ತಿಳಿಸಿದರು.

ಮೆನ್ನೆ ಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ಪಡಿತರ ಚೀಟಿ ದಾರರಿಗೆ ಅರ್ಜಿ ಸಲ್ಲಿಸಿ ಆರು ತಿಂಗಳಾದರೂ ಪಡಿತರ ಚೀಟಿ ದೊರೆಯದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು.ಪ್ರಸಕ್ತ ಆಧಾರ್ ಜೊಡಣೆಯೊಂದಿಗೆ ಹೊಸದಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡಿತರ ಚೀಟಿ ಪಡೆದುಕೊಳ್ಳಲು ಕ್ರಮ ಕೈ ಗೊಳ್ಳಲಾಗುತ್ತಿದೆ ಎಂದು ತಾಲೂಕು ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ ಸಭೆಗೆ ತಿಳಿಸಿದರು. ಸೀಮೆ ಎಣ್ಣೆ ಬಳಕೆಯ ಯನ್ನು ಹಂತ ಹಂತವಾಗಿ ನಿಲ್ಲಿಸಿ ಅಡುಗೆ ಅನಿಲವನ್ನು ಜನರು ಬಳಸುವ ಸಲುವಾಗಿ ಸರಕಾರ ಹೆಚ್ಚಿನ ಪೋತ್ಸಾಹ ನೀಡುತ್ತಿದೆ ಎಂದು ಇಲಾಖೆಯ ಅಧಿಕಾರಿ ಸಭೆಯ ಗಮನಕ್ಕೆ ತಂದರು.