- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹತ್ತು ಮಂದಿ ಸಾಧಕರಿಗೆ 2010-11ನೇ ಸಾಲಿನ ಸಾಧನಾ ಪ್ರಶಸ್ತಿ

Sadhana Award/ಸಾಧನಾ ಪ್ರಶಸ್ತಿ [1]

ಮಂಗಳೂರು : ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿವರ್ಷ ನೀಡುವ ಸಾಧನಾ ಪ್ರಶಸ್ತಿ ಸಮಾರಂಭವು ಆ. 28 ರಂದು ಸಂಜೆ 4 ಗಂಟೆಗೆ ಮಂಗಳೂರು ಪುರಭವನದಲ್ಲಿ ಜರಗಲಿದೆ. ಈ ಬಾರಿ ಒಂಭತ್ತು ಮಂದಿ ಹಿರಿಯ ಸಾಧಕರನ್ನು ಮತ್ತು ಒಬ್ಬ ಯುವ ಸಾಧಕರನ್ನು ಸಾಧನಾ ಯುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕನ್ನಡ ಚಲನಚಿತ್ರ, ಕಿರುತೆರೆ ಕ್ಷೇತ್ರದಲ್ಲಿ ಹಿರಿಯ ನಟ ಅನಂತವೇಲು, ಹಿರಿಯ ಚಲನಚಿತ್ರ ನಟಿ ರಾಧಾ ರಾಮಚಂದ್ರ ನೃತ್ಯ ಕೇಂದ್ರದಲ್ಲಿ ಹಿರಿಯ ನೃತ್ಯಗುರು ಮುರಳೀಧರ್‌ ರಾವ್‌, ತುಳು ರಂಗಭೂಮಿ ಮತ್ತು ತುಳು ಚಿತ್ರರಂಗ ಕ್ಷೇತ್ರದಲ್ಲಿ ನಿರ್ದೇಶಕ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪತ್ರಕರ್ತ ರೊನಾಲ್ಡ್‌ ಫೆರ್ನಾಂಡಿಸ್‌, ಸಾಹಿತ್ಯ ಕ್ಷೇತ್ರದಿಂದ ಹಿರಿಯ ಕವಿ ವಿಮರ್ಶಕ ವಿ. ಗ. ನಾಯಕ, ಯಕ್ಷಗಾನ ಕ್ಷೇತ್ರದಿಂದ ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ್‌ ರಾವ್‌, ಸಮಾಜಸೇವಾ ಕ್ಷೇತ್ರದಿಂದ ಹಿರಿಯ ಸಮಾಜಸೇವಕಿ ಸರಸ್ವತಿ ಭಟ್‌, ಅಧ್ಯಾಪನ, ಸಾಹಿತ್ಯ ಮತ್ತು ಪತ್ರಿಕಾ ಸಂಗ್ರಹ ಕ್ಷೇತ್ರದಿಂದ ಹಿರಿಯ ಲೇಖಕ ಉಮೇಶ್‌ ರಾವ್‌ ಎಕ್ಕಾರು ಹಾಗೂ ಗಾಯನ, ನಟನೆ ಮತ್ತು ಬ್ಯಾರಿ, ತುಳು ಭಾಷೆಯ ಆಡಿಯೋ ವಿಡಿಯೋ ಆಲ್ಬಂ ನಿರ್ಮಾಣದಲ್ಲಿ ಸಕ್ರಿಯನಾಗಿರುವ ಯುವ ಗಾಯಕ ಶರೀಫ್‌ ಕಾಟಿಪಳ್ಳ ಅವರಿಗೆ ಸಾಧನಾ ಯುವ ಪ್ರಶಸ್ತಿ ನೀಡಲಾಗುವುದು . .

2010-11ನೇ ಸಾಲಿನ ಸಾಧನಾ ಪ್ರಶಸ್ತಿಯನ್ನು ಸಚಿವ ಕೃಷ್ಣ ಜೆ. ಪಾಲೆಮಾರ್‌ ಸಾಧಕರಿಗೆ ಪ್ರದಾನ ಮಾಡಲಿದ್ದಾರೆ. ಸಮಾರಂಭವನ್ನು ಕರಾವಳಿ ಕಾಲೇಜು ಸಮೂಹದ ಸ್ಥಾಪಕಾಧ್ಯಕ್ಷ ಎಸ್‌. ಗಣೇಶ್‌ ರಾವ್‌ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಹಿರಿಯ ಕವಿ ನಾಟಕಕಾರ ಶಿವಾನಂದ ಕರ್ಕೇರ ಪ್ರಶಸ್ತಿ ಪುರಸ್ಕೃತರ ಅಭಿನಂದನೆಗೈಯುವರು. ಧರ್ಮೇಂದ್ರ ಗಣೇಶಪುರ ಶುಭಾಶಂಸನೆ ಮಾಡುವರು ಎಂದು ಪ್ರತಿಷ್ಠಾನದ ಅಧ್ಯಕ್ಷ ಕಾ. ವೀ. ಕೃಷ್ಣದಾಸ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲತಾ ಕೃಷ್ಣದಾಸ್‌, ರಾಜೇಶ್ವರಿ ಮಂಜುನಾಥ, ವಕ್ವಾಡಿ ಶೇಖರ್‌ ಶೆಟ್ಟಿ ಉಪಸ್ಥಿತರಿದ್ದರು.