- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಿನಲ್ಲಿ ಕುಡಿಯುವ ನೀರಿನ ಕೃತಕ ಅಭಾವ-ಆರೋಪ

Tumbe Dam ಮಂಗಳೂರು : ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದಿನನಿತ್ಯ ಸರಬರಾಜನ್ನು ಮಂಗಳೂರು ಮಹಾನಗರ ಪಾಲಿಕೆ ಕಡಿತಗೊಳಿಸಿದೆ. ಮೂವತ್ತಾರು ಗಂಟೆಗೊಮ್ಮೆ ನೀರು ಬಿಡಲಾಗುವುದೆಂದು ಘೋಷಣೆ ಮಾಡಿದೆ. ವಾಸ್ತವದಲ್ಲಿ ಜನತೆಗೆ ನೀರು ದೊರಕುತ್ತಿರುವುದು ಮೂರು ದಿನಕ್ಕೊಮ್ಮೆ ಮಾತ್ರ. ತುಂಬೆ ವೆಂಟೆಡ್ ಡ್ಯಾಮ್’ನಲ್ಲಿ ನೀರು ಶೇಖರಣೆ ಉತ್ತಮವಾಗಿದ್ದರೂ ಮಹಾ ನಗರ ಪಾಲಿಕೆ ಜನತೆಯಲ್ಲಿ ನೀರಿನ ಅಭಾವದ ಭೀತಿಯನ್ನು ಸೃಷ್ಟಿಸಿ ಜನರನ್ನು ಕುಡಿಯುವ ನೀರಿನಿಂದ ವಂಚಿಸಿ ಸಂಕಷ್ಟಕ್ಕೀಡು ಮಾಡುತ್ತಿದೆ. ಇದರಿಂದ ನಗೆರದ ಜನ ಆತಂಕಕ್ಕೀಡಾಗಿದ್ದಾರೆ. ನಗರ ಪಾಲಿಕೆಯ ಈ ನೀರು ನೀತಿಯ ಹಿಂದೆ ಮುಚ್ಚಿಟ್ಟ ಅಜೆಂಡಾ ಇದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆಯ ವೆಂಟೆಡ್ ಡ್ಯಾಮ್’ನಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಹಳೆಯ ಅಣೆಕಟ್ಟು ತುಂಬಿ ತುಳುಕಿದ್ದು, ಹೊಸ ಅಣೆಕಟ್ಟಿನಲ್ಲಿ ಕೂಡ 5 ಮೀ ಎತ್ತರಕ್ಕೆ ನೀರು ತುಂಬಿದೆ. ಈ ಹಿಂದಿನ ವರ್ಷಗಳಲ್ಲಿ ಹಳೆಯ ಡ್ಯಾಮ್ ನಲ್ಲಿ ಮಾರ್ಚ್ ತಿಂಗಳಲ್ಲಿ ಎರಡೂವರೆ ಮೀಟರ್ ಎತ್ತರಕ್ಕೆ ನೀರು ಇದ್ದ ಸಂದರ್ಭದಲ್ಲೂ ಜೂನ್ ಮೊದಲ ವಾರದ ವರೆಗೆ ನೀರಿನ ಅಭಾವ ಸೃಷ್ಟಿಯಾಗುತ್ತಿರಲಿಲ್ಲ. ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರಲಿಲ್ಲ. ಆದರೆ ಈ ಬಾರಿ ಹೊಸ ಡ್ಯಾಮ್ ಕಾರ್ಯಾರಂಭ ಮಾಡಿದೆ. ಹಳೆಯ ಡ್ಯಾಮ್ ಕೂಡ ನೀರಿನಿಂದ ತುಂಬಿದೆ. ಈ ಮಟ್ಟಿನ ನೀರಿನ ಸಂಗ್ರಹ ಇರುವಾಗಲೂ ಒಳಹರಿವು ನಿಂತಿರುವ ನೆಪ ಮುಂದಿಟ್ಟು ಜನತೆಗೆ ಕುಡಿಯುವ ನೀರು ವಂಚಿಸುತ್ತಿರುವುದು ಮಹಾ ನಗರ ಪಾಲಿಕೆಯ ಅವೈಜ್ಞಾನಿಕ ಕಣ್ಣೋಟ ಮತ್ತು ಜನವಿರೋಧಿ ನೀತಿಯನ್ನು ಎತ್ತಿತೋರಿಸುತ್ತದೆ. ಡ್ಯಾಮ್’ಗಳಲ್ಲಿ ಈಗ ಸಂಗ್ರಹಗೊಂಡಿರುವ ನೀರನ್ನು ಕನಿಷ್ಠ 75ರಿಂದ 80 ದಿನಗಳ ಕಾಲ ಪ್ರತಿ ದಿನವೂ ಪೂರೈಸಬಹುದು. ಹೀಗಿರುವಾಗ ಕುಡಿಯುವ ನೀರಿಗೆ ರೇಷನ್ ವ್ಯವಸ್ಥೆ ಮಾಡುವ ಅವಶ್ಯಕತೆಯೇ ಇರಲಿಲ್ಲ. ಮಹಾ ನಗರ ಪಾಲಿಕೆ 36 ಗಂಟೆಗೊಮ್ಮೆ ನೀರು ವಿತರಿಸಲಾಗುವುದು ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ಘೋಷಿಸಿದ್ದರೂ ಮೂರು ದಿನಕ್ಕೊಮ್ಮೆಯಷ್ಟೆ ನೀರು ಸರಬರಾಜು ಮಾಡಲಾಗುತ್ತಿದೆ.

ಈ ರೀತಿ ನಿರ್ಬಂಧಕ್ಕೊಳಪಡಿಸಿ ಸರಬರಾಜು ಮಾಡಿದರೆ ಈಗಿರುವ ನೀರಿನ ಸಂಗ್ರಹವನ್ನು ಮುಂದಿನ ಜುಲೈ ತಿಂಗಳವರೆಗೆ, ಅಂದರೆ ಮಳೆಗಾಲ ಆರಂಭವಾದ ಒಂದು ತಿಂಗಳ ನಂತರವೂ ವಿತರಿಸಬಹುದು. ಈ ರೀತಿ ನೀರನ್ನು ಅನವಶ್ಯಕವಾಗಿ ಸಂಗ್ರಹಿಸಿಡುವ ಅವಶ್ಯಕತೆ ಏನಿದೆ? ಇದರಲ್ಲಿ ಯಾರ ಹಿತಾಸಕ್ತಿಯನ್ನು ಕಾಯ್ದಿಡಲು ಮಹಾ ನಗರ ಪಾಲಿಕೆ ಯತ್ನಿಸುತ್ತಿದೆ? ಅನ್ನುವ ಅನುಮಾನಗಳು ನಾಗರಿಕರಲ್ಲಿ ಹುಟ್ಟಿಕೊಂಡಿವೆ. ಬಹಳ ಮುಖ್ಯವಾಗಿ, ಮಂಗಳೂರಿನ ಬೃಹತ್ ಕೈಗಾರಿಕೆಗಳಾದMRPL, SEZಗಳಿಗೆ ತುಂಬೆ ಅಣೆಕಟ್ಟಿನಿಂದ ನೀರು ಎತ್ತಲು ಮಹಾನಗರ ಪಾಲಿಕೆ ಯಾವುದೇ ನಿರ್ಬಂಧ ವಿಧಿಸಿಲ್ಲ.

ಕೈಗಾರಿಕೆಗಳಿಗೆ ಮಾತ್ರ ಬೇಕಾದಷ್ಟು ನೀರನ್ನು ಬಳಸಲು ಅವಕಾಶ ಕೊಟ್ಟು, ಜನತೆಯನ್ನು ಕುಡಿಯುವ ನೀರಿನಿಂದ ವಂಚಿಸುವ ಹುನ್ನಾರ ನಗರಪಾಲಿಕೆಯ ಈ ತೀರ್ಮಾನದ ಹಿಂದಿದೆ ಎಂದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಮಂಗಳೂರಿನ ಜನರ ಅಗತ್ಯಕ್ಕಾಗಿ ಕಟ್ಟಲಾಗಿರುವ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಿಟ್ಟು, ಜನರಿಗೆ ಕುಡಿಯುವ ನೀರಿಗೆ ಪರದಾಡುವಂತೆ ಮಾಡುವ ಈ ನೀತಿ ಮುಂದಿನ ಮಳೆಗಾಲದವರೆಗೆ ಕೈಗಾರಿಕೆಗಳಿಗೆ ಯಥೇಚ್ಛವಾಗಿ ನೀರು ಪೂರೈಸುವ ಹುನ್ನಾರವಾಗಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಜಿಲ್ಲಾಡಳಿತ ಈ ಕುರಿತು ತತ್ ಕ್ಷಣ ಮಧ್ಯ ಪ್ರವೇಶ ಮಾಡಬೇಕು, ನಗರ ಪಾಲಿಕೆ ನೀರು ಸರಬರಾಜಿನ ಮೇಲೆ ಹೇರಿರುವ ನಿರ್ಬಂಧ ತೆಗೆದು ಹಾಕಿ ಶೇಖರಣೆಯಲ್ಲಿರುವ ನೀರನ್ನು ನಿಯಮಿತವಾಗಿ ಜನತೆಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ, ಕೈಗಾರಿಕೆಗಳ ಹಿತಕಾಯಲು ಜನರನ್ನು ನೀರಿಗಾಗಿ ಪರಿತಪಿಸುವಂತೆ ಮಾಡುತ್ತಿರುವ ಮಹಾ ನಗರ ಪಾಲಿಕೆಯ ನಿಲುವಿನ ವಿರುದ್ಧ ಜನತೆಯನ್ನು ಸಂಘಟಿಸಿ ಡಿವೈಎಫ್ಐ ಹೋರಾಟ ನಡೆಸುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.