ಚಿಕ್ಕಮಗಳೂರು : ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ದಿಣ್ಣೆಕೆರೆ -ಮಾವಿನಹಳ್ಳಿಯ ತಿರುವಿನಲ್ಲಿ ಬುಧವಾರ ಸಂಜೆ ಬೈಕ್ ಹಾಗೂ ಬಸ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿದ್ದು , ಖಾಸಗಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬಸ್‌ನಲ್ಲಿದ್ದ 70 ಕ್ಕೂ ಅಧಿಕ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಅನಿತಾ -ಜಗದೀಶ್ ಮದುವೆಗೆ ಭದ್ರಾವತಿಯಿಂದ ಖಾಸಗಿ ಬಸ್ಸಿನಲ್ಲಿ 70ಕ್ಕೂ ಅಧಿಕ ಮಂದಿ ಹೋಗಿದ್ದರು. ಇನ್ನೊಂದೆಡೆ ಶಿವಮೊಗ್ಗದ ವೀರಭದ್ರ ಕಾಲನಿಯ ನಂದೀಶ್ ಹಾಗು ಭೈರೇಶ್ ಬೈಕಿನಲ್ಲಿ ವಿಹಾರಾರ್ಥ ಧರ್ಮಸ್ಥಳಕ್ಕೆ ತೆರಳುತ್ತಿದ್ದರು.
ಬಸ್ ಮದುವೆ ಸಂಭ್ರಮ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮಾವಿನಹಳ್ಳಿಯ ತಿರುವಿನಲ್ಲಿ ಎದುರಿನಿಂದ ಬಂದ ಬೈಕಿಗೆ ಅಪ್ಪಳಿಸಿದೆ. ಬಸ್ ಗುದ್ದಿದ ರಭಸಕ್ಕೆ ಬೈಕ್ ಸಮೇತ ಇಬ್ಬರೂ ಬಸ್ಸಿನ ಕೆಳಗೆ ಸಿಲುಕಿದ್ದಾರೆ. ಕ್ಷಣ ಮಾತ್ರದಲ್ಲಿ ಬೈಕಿನಿಂದ ಪೆಟ್ರೋಲ್ ಸುರಿದು ಬೆಂಕಿ ಹೊತ್ತಿಕೊಂಡಿದೆ. ತೀವ್ರವಾಗಿ ಗಾಯಗೊಂಡ ನಂದೀಶನನ್ನು ಹೊರಗೆ ಎಳೆಯಲಾಯಿತಾದರೂ, ಭೈರೇಶನನ್ನು ಉಳಿಸಲು ಸಾಧ್ಯವಾಗಲಿಲ್ಲ.
ಬಸ್ಸಿನಲ್ಲಿ ಕುಳಿತಿದ್ದವರಿಗೆ ಢಂ ಎನ್ನುವ ಶಬ್ಧ ಕೇಳಿಸಿದೆ. ಕ್ಷಣ ಮಾತ್ರದಲ್ಲಿ ಹೊತ್ತಿದ ಬೆಂಕಿ ಭೈರೇಶನನ್ನು ಆವರಿಸಿ ಸಂಪೂರ್ಣ ಭಸ್ಮ ಮಾಡಿದೆ. ಕರಕಲಾದ ದೇಹ ಗುರುತಾಗಿ ಉಳಿದಿದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಬಸ್ಸಿನ ತುಂಬೆಲ್ಲಾ ಹೊಗೆ. ಅಷ್ಟರಲ್ಲಿ ಹಿಂದಿನಿಂದ ಧರ್ಮಸ್ಥಳದಿಂದ ಕಡೂರಿಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕ ಸಂಗಪ್ಪ ಬಸ್ಸಿಗೆ ಬೆಂಕಿ ಹತ್ತಿ ಆಗಲಿದ್ದ ಭಾರಿ ಅನಾಹುತದ ಸೂಚನೆ ಅರಿತು ಧಾವಿಸಿ ಖಾಸಗಿ ಬಸ್ಸಿನ ಗಾಜುಗಳನ್ನು ಒಡೆದು, ಬಾಗಿಲನ್ನು ತೆರೆದು ಅದರಲ್ಲಿ ಇದ್ದವರು ಇಳಿಯಲು ನೆರವಾಗಿದ್ದಾರೆ. ಈ ಕೆಲಸ ಸ್ವಲ್ಪ ವಿಳಂಬವಾಗಿದ್ದರೂ ಅನೇಕ ಮಂದಿ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಚಿಕ್ಕಮಗಳೂರು ಹಾಗೂ ಮೂಡಿಗೆರೆಯಿಂದ ಅಗ್ನಿ ಶಾಮಕ ದಳ ವಾಹನಗಳು ತೆರಳಿ ಬಸ್ಸಿನಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಹೆಚ್ಚುವರಿ ರಕ್ಷಣಾಧಿಕಾರಿ ಮಿತ್ರ ಹೆರಾಜೆ,ಉಪ ಅಧೀಕ್ಷಕ ವೇದಮೂರ್ತಿ, ಗ್ರಾಮಾಂತರ ವೃತ್ತ ನಿರೀಕ್ಷಕ ಪಂಚಾಕ್ಷರಯ್ಯ ಇತರರು ಭೇಟಿ ನೀಡಿದ್ದರು.
Click this button or press Ctrl+G to toggle between Kannada and English