- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ ಸಿದ್ದರಾಮಯ್ಯನವರಂತೆ ನಿದ್ದೆ ಮಾಡುತ್ತಿದ್ದಾರೆ

bjpಮಂಗಳೂರು:  ಮಂಗಳೂರು ಮತ್ತು ಬಂಟ್ವಾಳವನ್ನು ಬರ ಪೀಡಿತ ತಾಲೂಕುಗಳಾಗಿ ಘೋಷಿಸಿರುವ ಸರಕಾರ ಅದಕ್ಕೆ ಏನನ್ನೂ ಮಾಡಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ ಸಿದ್ದರಾಮಯ್ಯನವರಂತೆ ನಿದ್ದೆ ಮಾಡುತ್ತಿದ್ದಾರೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಮಠಂದೂರು, ಬರ ಪರಿಹಾರಕ್ಕೆ ತುರ್ತಾಗಿ ಸ್ಪಂದಿಸಿ ಪರಿಹಾರ ನೀಡಬೇಕಾದವರು ವ್ಯರ್ಥ ಕಾಲಹರಣ ಮಾಡಿ ನಿದ್ದೆ ಮಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಚುನಾವಣೆ ವೇಳೆ ತಾನು ನೀಡಿದ ಭರವಸೆಗಳನ್ನು ಮರೆತು ಭ್ರಷ್ಟಾಚಾರ, ನಿರ್ಲಕ್ಷ್ಯ ಧೋರಣೆಗಳಲ್ಲಿ ನಾಲ್ಕು ವರ್ಷ ಪೂರ್ಣಗೊಳಿಸಿದೆ. ಅಧಿಕಾರಕ್ಕೆ ಬಂದ ಬಳಿಕ 91,269 ಕೋಟಿಗಳಷ್ಟು ಹಣವನ್ನು ಸಾಲ ಮಾಡಿರುವುದಲ್ಲದೆ, ಈ ವರ್ಷದ ಮುಂಗಡ ಪತ್ರದಲ್ಲಿ 37,092 ಕೋಟಿಗಳ ಸಾಲಕ್ಕೆ ವ್ಯವಸ್ಥೆ ಮಾಡಿಟ್ಟು ಒಟ್ಟು 1,28,361 ಕೋಟಿಗಳ ಸಾಲವನ್ನು ರಾಜ್ಯದ ಮೇಲೆ ಹೇರಿದೆ. ಇದರಿಂದಾಗಿ ಸರ್ಕಾರ ನೀಡುತ್ತಿರುವ ಭಾಗ್ಯಗಳಿಗೆ ಪ್ರತಿಯಾಗಿ ಸಾಲ ತೀರಿಸುವ ದೌರ್ಭಾಗ್ಯ ಜನರದ್ದು ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಬರ ನಿರ್ವಹಣೆಗಾಗಿ 5,327 ಕೋಟಿ ಹಣ ನೀಡಿದ್ದರೂ ರಾಜ್ಯ ಸರ್ಕಾರ ಅಸಡ್ಡೆ ಧೋರಣೆ ಅನುಸರಿಸಿದೆ. 2013ರಿಂದ 17ರ ತನಕ ರಾಜ್ಯದಲ್ಲಿ 1,92,319 ಕ್ಯೂಬಿಕ್ ಮೀಟರ್‌ಗಳಷ್ಟು ಮರಳು ಅಕ್ರಮವಾಗಿ ಸಾಗಾಟವಾಗಿರುವುದು ಪ್ರಭಾವಿಗಳ ಜತೆ ‘ಕೈ’ ಸರ್ಕಾರ ಶಾಮೀಲಾಗಿದೆ ಎಂಬುದಕ್ಕೆ ನಿದರ್ಶನ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಳೆದ ನಾಲ್ಕು ವರ್ಷಗಳಲ್ಲಿ 2,573 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆಂಟರ್ ಫಾರ್ ಮೀಡಿಯಾ ಸಂಸ್ಥೆ ದೇಶದ 20 ಪ್ರಮುಖ ರಾಜ್ಯಗಳಲ್ಲಿ ಗ್ರಾಮೀಣ ಹಾಗೂ ನಗರ ವಾಸಿಗಳು ಸೇರಿದಂತೆ ನಡೆಸಿದ ಸಮೀಕ್ಷೆಯಲ್ಲಿ ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮುಂಚೂಣೆಯಲ್ಲಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಕ್ಯಾ. ಬ್ರಿಜೇಶ್ ಚೌಟ, ಸಂಜಯ ಪ್ರಭು, ಸುದರ್ಶನ ಮೂಡುಬಿದಿರೆ, ಕಿಶೋರ್ ಶೆಟ್ಟಿ ವಿಕಾಸ್ ಪುತ್ತೂರು, ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.