- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಖ್ಯಾತ ರಂಗ ಕಲಾವಿದ ಕಾಸರಗೋಡು ಮುರಹರಿ ಇನ್ನಿಲ್ಲ

murahari [1]ಮಂಗಳೂರು: ಖ್ಯಾತ ರಂಗ ಕಲಾವಿದ, ನಿರ್ದೇಶಕ,  ನಾಟಕಕಾರ ನೀನಾಸಂ ಪದವೀಧರ ಮುರಹರಿ ಕಾಸರಗೋಡು (46) ಕಿಡ್ನಿ ವೈಫಲ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮುರಹರಿ ನಾಲ್ಕು ವರುಷದ ಹಿಂದೆ ‘ಜಾನಪದ’ ಎಂಬ ಸಂಘಟನೆಯ ಮೂಲಕ ಕಲಾ ಚಟುವಟಿಕೆಯಲ್ಲಿ ತೊಡಗಿದ್ದರು. ಬಳಿಕ  ರಸ್ತೆ ಅಪಘಾತದಲ್ಲಿ ತನ್ನ ಕೈ ಕಾಲುಗಳ ಬಲ ಕಳೆದುಕೊಂಡು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೂ ತನ್ನ ಅಭಿರುಚಿಯನ್ನು ನಿಲ್ಲಿಸದೆ ಮತ್ತೆ ನಾಲ್ಕು ಚಕ್ರದ ಮೋಟಾರು ಸೈಕಲ್ ವಾಹನ ಏರಿ ಹಲವಾರು ಊರುಗಳಿಗೆ ಶಿಬಿರಗಳಿಗೆ ತೆರಳಿ ಮಕ್ಕಳ ಜೊತೆ ತನ್ನಲ್ಲಿದ್ದ ಪ್ರತಿಭೆಯನ್ನು ಹಂಚಿಕೊಳ್ಳುವ ಕಾಯಕದಲ್ಲಿ ನಿರತರಾಗಿದ್ದರು.

ಮುರಹರಿ ಕಾಸರಗೋಡು ಬಾಲ್ಯಾವಸ್ಥೆಯಲ್ಲಿ ಅದ್ಭುತ ಕಲಾವಿದನಾಗಿದ್ದು ಅದೇ ಅಭಿರುಚಿಯನ್ನು ಮುಂದುವರೆಸಿ ಮುಂದೆ ಅವರು ನೀನಾಸಂನಲ್ಲಿ ಪದವಿ ಪಡೆದು ಹಲವಾರು ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ನಾಟಕಗಳ ಜೊತೆ ಅವುಗಳಿಗೆ ಬೇಕಾದ ವಸ್ತ್ರ ವಿನ್ಯಾಸಗಳನ್ನು ಕೂಡ ಅವರೇ ರಚಿಸುತ್ತಿದ್ದರು.

ಹಲವಾರು ಶಾಲಾ ಕಾಲೇಜು ಮಕ್ಕಳಿಗೆ ರಜಾ ಕಾಲದಲ್ಲಿ ಬೇಸಿಗೆ ಶಿಬಿರಗಳನ್ನು ನಡೆಸಿ ಪಠ್ಯೇತರ ಚಟುವಟಿಕೆಗಳನ್ನು ಕಲಿಸಿಕೊಡುವ ಮೂಲಕ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹೊಮ್ಮುವ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.