ಮಂಗಳೂರು : ಕೇಂದ್ರ ಸರಕಾರವು ಜಾನುವಾರುಗಳನ್ನು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿರುವುದನ್ನು ಮತ್ತು ತೆಲಂಗಾಣ ರಾಜ್ಯದ ಕೀಸರ ಎಂಬಲ್ಲಿನ ಫಾತಿಮಾ ಚರ್ಚ್ ಮೇಲೆ ನಡೆದ ದಾಳಿಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿಯು ಬುಧವಾರ ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಮಾತನಾಡಿ ಕಳೆದ ಮೂರು ವರ್ಷದಿಂದ ಆಡಳಿತ ನಡೆಸುತ್ತಿರುವ ಮೋದಿ ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸಲು ವಿಫಲರಾಗಿದ್ದಾರೆ. ಅದನ್ನು ಮರೆಮಾಚಲು ನೋಟು ರದ್ಧತಿ, ಲವ್ ಜಿಹಾದ್, ತ್ರಿವಳಿ ತಲಾಖ್ ಇಂತಹ ಸೂಕ್ಷ್ಮ ವಿಚಾರಗಳನ್ನು ಕೆದಕುತ್ತಿದ್ದಾರೆ. ಇದೀಗ ಸಂಘಪರಿವಾರವನ್ನು ಖುಷಿಪಡಿಸಲು ಜಾನುವಾರು ಮಾರಾಟ ಮಾಡಲು ಹೊರಟಿದೆ. ಆ ಮೂಲಕ ದೇಶಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿ ಹೇರಲು ಹುನ್ನಾರ ನಡೆಸುತ್ತಿದ್ದಾರೆ. ಮೋದಿಯ ಈ ವಿವೇಚನಾರಹಿತ ನಿರ್ಧಾರವನ್ನು ಪಕ್ಷ ನ್ಯಾಯಾಲಯದಲ್ಲಿ ಹೋರಾಟ ಮಾಡಲಿದೆ ಎಂದರು.
ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಮಾತನಾಡಿ ಮೋದಿಯ ಈ ನಿರ್ಧಾರದಿಂದ ಕೋಟ್ಯಂತರ ಮಂದಿ ನಿರು ದ್ಯೋಗಿಗಳಾಗುವ ಸಾಧ್ಯತೆಯಿದೆ. ನಿರ್ದಿಷ್ಟ ಸಮುದಾಯವು ಗೋವುಗಳ ವ್ಯಾಪಾರದಲ್ಲಿ ತೊಡಗಿದೆ ಎಂಬ ಏಕೈಕ ಕಾರಣಕ್ಕಾಗಿ ಮೋದಿ ಈ ಅಧಿಸೂಚನೆ ಹೊರಡಿಸಿದ್ದಾರೆ. ಯಾವುದೇ ಅಡೆತಡೆ ಬಂದರೂ ಆಹಾರದ ಹಕ್ಕಿಗೆ ಕಡಿವಾಣ ಹಾಕಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ ಎನ್‌ಡಿಎ ಸರಕಾರದ ಈ ವಿವೇಚನಾರಹಿತ ಕ್ರಮದಿಂದ ದೇಶದ 1 ಲಕ್ಷ ಕೋಟಿ ರೂ. ವಹಿವಾಟಿನ ಮಾಂಸ ಮಾರುಕಟ್ಟೆಯ ಮೇಲೆ ಬಾಧಿಸಲಿದೆ. ಕೇಂದ್ರದ ಈ ಕ್ರಮದಿಂದ ರೈತರ ಬದುಕು ಶೋಚನೀಯವಾಗಲಿದೆ. ಬಡ ರೈತ ತನ್ನ ಮುದಿ ಜಾನುವಾರುಗಳನ್ನು ಏನು ಮಾಡಬೇಕು ಎಂಬ ಪ್ರಶ್ನೆಗೆ ಈ ಅಧಿಸೂಚನೆಯಲ್ಲಿ ಉತ್ತರವಿಲ್ಲ. ಕೇಂದ್ರ ಸರಕಾರವು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾನುವಾರುಗಳ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ಮತ್ತು ದಲಿತರ ಮೇಲೆ ನಡೆಸುವ ದಾಳಿಯ ಮುನ್ಸೂಚನೆ ಇದಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲ್ಫೋನ್ಸೊ ಫ್ರಾಂಕೋ ಮಾತನಾಡಿ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ನೀತಿಯ ಬದಲು ಮೋದಿ ಸರಕಾರವು ದನಗಳಿಂದ, ದನಗಳ್ಳರಿಗಾಗಿ, ದನಗಳ್ಳರಿಗೋಸ್ಕರ ಎಂಬಂತೆ ಆಡಳಿತ ನಡೆಸುತ್ತಿದೆ. ಮೇಕ್ ಇನ್ ಇಂಡಿಯಾದ ಬದಲು ಫೇಕ್ ಇನ್ ಇಂಡಿಯಾ ಮಾಡುತ್ತಿದೆ. ಹಿಂದುಳಿದವರು, ರೈತರು, ಮುಸ್ಲಿಮರು, ಕ್ರೈಸ್ತರು ಗೋವು ಮಾಂಸಗಳನ್ನು ತಿನ್ನುವಾಗ ಗೋವು ಇವರಿಗೆ ದೇವರಾಗುತ್ತದೆ. ಅದೇ ವಿದೇಶಕ್ಕೆ ರಫ್ತು ಮಾಡುವಾಗ ಅದು ದೇವರಾಗುವುದಿಲ್ಲ ಎಂದು ವ್ಯಂಗ್ಯವಾಡಿದರಲ್ಲದೆ, ಇಂದು ಗೋವುಗಳ ಮಾರಾಟ, ಮಾಂಸ ಸೇವನೆಗೆ ನಿಷೇಧ ಹೇರಿದ ಮೋದಿ ನಾಳೆ ಇಲಿಯನ್ನು ರಕ್ಷಿಸಿ ರೈತರಿಗೆ ನಷ್ಟ ಮಾಡೀತು, ಹಂದಿಯನ್ನು ರಕ್ಷಿಸಿ ಕ್ರೈಸ್ತರ ಆಹಾರದ ಮೇಲೂ ದಾಳಿ ಮಾಡೀತು ಎಂದು ಎಚ್ಚರಿಸಿತು.
ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್‌ಡಿಟಿಯು ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಸಜಿಪನಡು ಗ್ರಾಪಂ ಅಧ್ಯಕ್ಷ ನಾಸಿರ್ ಸಜಿಪ, ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ನವಾಝ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.
ಎಸ್‌ಡಿಪಿಐ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ವಂದಿಸಿದರು. ಝಾಹಿದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.
ದೇಶವನ್ನು ಸಸ್ಯಹಾರಿಯನ್ನಾಗಿಸುವ ಮತ್ತು ಮುಸ್ಲಿಮರ ಬಕ್ರೀದ್ ಸಂದರ್ಭ ‘ಕುರ್ಬಾನಿ’ ಎಂಬ ಧಾರ್ಮಿಕ ಕ್ರಿಯೆಗೆ ಅಡ್ಡಿಪಡಿಸುವ ಸಂಚು ಈ ಅಧಿಸೂಚನೆಯಲ್ಲಿ ಅಡಗಿದ್ದು, ಇದರ ವಿರುದ್ಧ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದು ಎಸ್‌ಡಿಪಿಐ ಮನವಿ ಮಾಡಿದೆ.
Click this button or press Ctrl+G to toggle between Kannada and English