- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹದಿಹರೆಯದ ಮಕ್ಕಳನ್ನು ಪೋಷಕರು ಬಹಳ ಜಾಗರೂಕತೆಯಿಂದ ಪೋಷಿಸಬೇಕು : ರಾಮಕೃಷ್ಣ ರಾವ್

drugs day [1]ಮಂಗಳೂರು  : ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳೇ ಮಾದಕ ವಸ್ತುಗಳಿಗೆ ಆಕರ್ಷಿತರಾಗುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳ ಬಾಹ್ಯ ಚಟುವಟಿಕೆಗಳ ಮೇಲೆ ನಿಗಾ ಇಡಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಕರೆ ನೀಡಿದ್ದಾರೆ.

ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಮಾನಸಿಕ ವಿಭಾಗ) ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಕೀಲರ ಸಂಘ ಮತ್ತು ಸರ್ಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಮಂಗಳೂರು ಇವರುಗಳ ಸಹಯೋಗದೊಂದಿಗೆ ಬುಧವಾರ ವೆನ್‍ಲಾಕ್ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ಹಾಗೂ ಅಕ್ರಮ ಕಳ್ಳಸಾಗಾಣಿಕೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 8 ರಿಂದ ಪಿಯುಸಿವರೆಗಿನ ಹುಡುಗರ ದೈಹಿಕ ಬದಲಾವಣೆ ಸಂದರ್ಭ ಅವರ ಮನಸ್ಸು ಚಂಚಲತೆಯಲ್ಲಿದ್ದು, ಸುಲಭವಾಗಿ ಆಕರ್ಷಿತವಾಗುವಂತಿರಲಿದೆ. ಇಂತಹ ಸಂದರ್ಭದಲ್ಲಿ ಮಾದಕ ವಸ್ತುಗಳು ಹಾಗೂ ಅಂತಹ ಚಟ ಹೊಂದಿರುವ ಸ್ನೇಹಿತರ ಸಹವಾಸವು ಬಾಲಕರಿಗೆ ಆಕರ್ಷಿತವಾಗಿ ಅವರ ಜೀವನಾವಸ್ಥೆಯನ್ನೇ ಅಪಾಯಕ್ಕೀಡು ಮಾಡಲಿದೆ. ಈ ನಿಟ್ಟಿನಲ್ಲಿ ಹದಿಹರೆಯದ ಮಕ್ಕಳನ್ನು ಪೋಷಕರು ಬಹಳ ಜಾಗರೂಕತೆಯಿಂದ ಪೋಷಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮವನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ ಉದ್ಘಾಟಿಸಿ, ಇತ್ತ್ತೀಚಿನ ದಿನಗಳಲ್ಲಿ ಯುವ ಜನರು, ಬೇರೆ ಬೇರೆ ಕಾರಣಗಳಿಂದಾಗಿ ಮಾದಕ ದ್ರವ್ಯ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಆಧುನಿಕ ಮುಂದುವರಿದಂತೆ ಮಾದಕ ದ್ರವ್ಯ ಚಟುವಟಿಕೆಗಳ ಸಂಖ್ಯೆ ಹೆಚ್ಚಾಗುವುದರೊಂದಿಗೆ ಸಮಾಜಘಾತಕ ಚಟುವಟಿಕೆಗಳು ಹೆಚ್ಚಾಗುತ್ತಿವೆ. ತಂದೆ-ತಾಯಿಗಳು, ಹಿರಿಯರು ತಮ್ಮ ಮಕ್ಕಳ ಬಗ್ಗೆ ಇಟ್ಟುಕೊಂಡಿರುವ ನಿರೀಕ್ಷೆ ಭರವಸೆಗಳು ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಈ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳ ಮೂಲಕ ಎಲ್ಲಾ ಇಲಾಖೆಗಳ ಸಹಾಯ ಸಹಕಾರದೊಂದಿಗೆ ಯುವ ಜನತೆಗೆ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಎಲ್ಲರು ಕೈ ಜೋಡಿಸಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೆನ್‍ಲಾಕ್ ಅಧೀಕ್ಷಕಿ ಡಾ.ರಾಜೇಶ್ವರಿದೇವಿ ಮಾತನಾಡಿ, ವೆನ್‍ಲಾಕ್‍ನಲ್ಲಿ ಮಾದಕ ವಸ್ತುಗಳ ಅಮಲು ನಿಯಂತ್ರಣಕ್ಕೆ ಪ್ರತ್ಯೇಕ ಘಟಕವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.

ಶ್ರೀನಿವಾಸ ಮೆಡಿಕಲ್ ಕಲೇಜಿನ ಮಾನಸಿಕ ರೋಗ ತಜ್ಞೆ ಡಾ. ಕೆರೋಲಿನ್ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮಯ್ಯ, ಡಾ.ಜಯಂತ್, ವಕೀಲರ ಸಂಘದ ಉಪಾಧ್ಯಕ್ಷೆ ಪುಷ್ಪಲತಾ, ಕಾರ್ಯದರ್ಶಿ ದಿನಕರ ಶೆಟ್ಟಿ, ಎಸಿಪಿ ಉದಯ ನಾಯಕ್ ಮತ್ತಿತರರು ಇದ್ದರು.

ಜಿಲ್ಲಾ ಕುಷ್ಠರೋಗ ಹಾಗೂ ಅಂಧತ್ವ ನಿಯಂತ್ರಣಾಧಿಕಾರಿ ಡಾ. ರತ್ನಾಕರ್ ಸ್ವಾಗತಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ವಂದಿಸಿದರು. ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಗಣಪತಿ ಪದವಿಪೂರ್ವ ಕಾಲೇಜಿನಿಂದ ವೆನ್‍ಲಾಕ್‍ವರೆಗೆ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು.