- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪೇಜಾವರ ಸ್ವಾಮೀಜಿಯ ಪಾದಪೂಜೆ ಮಾಡಿದ ಉಮಾಭಾರತಿ

UmaBharathi [1]ಉಡುಪಿ :ಕೇಂದ್ರ ಜಲ ಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವೆ ಉಮಾಭಾರತಿ ರವಿವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು.

ಸಚಿವೆ ಉಮಾ ಭಾರತಿ ಪೇಜಾವರ ಸ್ವಾಮೀಜಿ ಜೊತೆ ಬೆಳಗ್ಗೆ ಮಠಕ್ಕೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಗುರು ಪೂರ್ಣಿಮೆಯ ಅಂಗ ವಾಗಿ ಬಡಗುಮಾಳಿಗೆಯಲ್ಲಿ ಸಚಿವೆ ನೆಲದಲ್ಲಿ ಕೂತು ಗುರು ಪೇಜಾವರ ಸ್ವಾಮೀಜಿಯ ಪಾದವನ್ನು ತೊಳೆದು ಪೂಜೆ ನೆರವೇರಿಸಿ ಆರತಿ ಬೆಳಗಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಉಮಾಭಾರತಿ, ಇಂದು ಗುರುಪೂರ್ಣಿಮೆ ದಿನ.  ಪೇಜಾವರ ಸ್ವಾಮೀಜಿಯ ಪಾದಪೂಜೆ ನೆರವೇರಿಸಲು ಇಂದು ಇಲ್ಲಿಗೆ ಆಗಮಿಸಿದ್ದೇನೆ. ಅವರು ನನಗೆ 1992ರಲ್ಲಿ ಸನ್ಯಾಸ ದೀಕ್ಷೆಯನ್ನು ನೀಡಿದ್ದರು. ಸನ್ಯಾಸ ದೀಕ್ಷೆ ಸ್ವೀಕರಿಸಿ ಇಂದಿಗೆ 25ವರ್ಷ ಗಳಾಗಿವೆ. 17ವರ್ಷಗಳ ಬಳಿಕ ನಾನು ಗುರುಪೂರ್ಣಿಮೆ ದಿನ ಶ್ರೀಕೃಷ್ಣ ಮಠ ದಲ್ಲಿ ಪೇಜಾವರ ಸ್ವಾಮೀಜಿಯನ್ನು ಭೇಟಿಯಾಗುತ್ತಿದ್ದೇನೆ ಎಂದರು.

ನನ್ನ ಗುರು ಪೇಜಾವರ ಸ್ವಾಮೀಜಿ ದೇಶ ಕಂಡ ಶ್ರೇಷ್ಠ ಸಮಾಜ ಸುಧಾರಕರು. ದೇಶದಲ್ಲಿ ಹಲವು ಸಮಾಜ ಸುಧಾರಣೆಗಳನ್ನು ತರುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಅಲ್ಲದೆ ಈ ಸ್ಥಳ ಕನಕದಾಸರಿಗೆ ಪ್ರಖ್ಯಾತಿ. ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಮಠದಲ್ಲಿ ನಾನು ರಾಜಕೀಯ ಹೇಳಿಕೆಗಳನ್ನು ನೀಡಲು ಇಚ್ಛಿಸುವುದಿಲ್ಲ ಎಂದು ಅವರು ತಿಳಿಸಿದರು.

ಇಂದು ಉಡುಪಿಯಲ್ಲೇ ಉಳಿದು ಕೊಂಡಿರುವ ಸಚಿವೆ ಉಮಾ ಭಾರತಿ ರಾತ್ರಿ ಶ್ರೀಕೃಷ್ಣ ಮಠದ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು, ನಾಳೆ ಪಾಜಕ ಕ್ಷೇತ್ರಕ್ಕೆ ಭೇಟಿ ನೀಡಲಿರುವರು. ನಂತರ ಮಧ್ಯಾಹ್ನ ಅವರು ಉಡುಪಿಯಿಂದ ದೆಹಲಿಗೆ ಹೊರಡಲಿದ್ದಾರೆ.