- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರಾವಳಿಯ ಜಿಲ್ಲೆಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಕಚ್ಚಾಟದಿಂದ ಅಭಿವೃದ್ದಿ ಕುಂಠಿತವಾಗಿದೆ : ಕುಮಾರಸ್ವಾಮಿ

hdk [1]ಉಡುಪಿ : ಕರಾವಳಿಯ ಜಿಲ್ಲೆಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಇಲ್ಲಿನ ಅಭಿವೃದ್ದಿಗಿಂತ ಹೆಚ್ಚಾಗಿ ಧರ್ಮ ಹಾಗೂ ಭಾವನಾತ್ಮಕ ವಿಷಯಗಳಿಗೆ ಆದ್ಯತೆ ನೀಡುತ್ತಿವೆ. ಇಲ್ಲಿ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡುತ್ತಿದ್ದರೆ ಮಂಗಳೂರು ನಗರ ಬೆಂಗಳೂರು ನಗರಕ್ಕೆ ಸಮಾನವಾಗಿ ಬೆಳೆಯುತ್ತಿತ್ತು. ಆದರೆ ಇವರು ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡದೆ ಜನ ಸಾಮಾನ್ಯರು ಆತಂಕದಲ್ಲಿ ಜೀವನ ನಡೆಸುವಂತೆ ಮಾಡುತ್ತಿದ್ದಾರೆ. ಹೀಗಾಗಿ ಕರಾವಳಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯ ಅಸಹಜ ಸಾವಿನ ಪ್ರಕರಣದಲ್ಲಿ ಕೆಲವು ಮಾಧ್ಯಮಗಳು ತಮಗೆ ಬೇಕಾದಂತೆ ವರದಿ ಮಾಡುತ್ತಿವೆ. ಇದೊಂದು ಕೊಲೆ ಎಂಬುದಾಗಿ ಹೇಳಿ ಬಿಂಬಿಸಲಾಗುತ್ತಿದೆ. ಇಂತಹ ಆರೋಪಗಳೊಂದಿಗೆ ಸಂಸ್ಥೆಯ ಹೆಸರನ್ನು ಕೆಡಿಸುವ ಪ್ರಯತ್ನವನ್ನು ಎಬಿವಿಪಿ ಸಂಘಟನೆ, ಮಾಧ್ಯಮಗಳು ಮಾಡುತ್ತಿವೆ.ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ಪ್ರಕರಣದ ಕುರಿತು ಸಾರ್ವಜನಿಕರಲ್ಲಿ ಯಾವುದೇ ರೀತಿಯ ಅನುಮಾನಕ್ಕೆ ಅವಕಾಶ ಮಾಡಿಕೊಡದೆ ಸತ್ಯಾಸತ್ಯತೆಯನ್ನು ಹೇಳಬೇಕಿರುವುದು ಅಧಿಕಾರಿಗಳ ಕರ್ತವ್ಯ. ಹಾಗಾಗಿ ಸತ್ಯಾಂಶ ಹೊರಬರಲಿ ಎಂದವರು ಹೇಳಿದರು.

ರಾಜ್ಯ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಜನಸಾಮಾನ್ಯರಿಗೆ ಅನಾನೂಕೂಲ ರೀತಿಯಲ್ಲಿ ಮರಳು ನೀತಿಯನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಮರಳುಗಾರಿಕೆಗೆ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಮೇಲೆಯೇ ದಾಳಿ ನಡೆಸಲಾಗಿತ್ತು. ಜಿಲ್ಲಾಧಿಕಾರಿಗಳಿಗೆ ರಕ್ಷಣೆ ಕೊಡದ ಸರಕಾರ ಜನಸಾಮಾನ್ಯರಿಗೆ ಯಾವ ರೀತಿ ರಕ್ಷಣೆ ಕೊಡಬಹುದು ಎಂದು ಪ್ರಶ್ನಿಸಿದರು.

ಮಂಗಳೂರಿನ ರಸ್ತೆಗೆ ಮುಲ್ಕಿ ಸುಂದರಾಮ್ ಶೆಟ್ಟಿ ಹೆಸರಿಡಲು ಸರಕಾರವೇ ಒಪ್ಪಿಗೆಕೊಟ್ಟು, ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ ಈ ಭಾಗದ ಶಾಸಕರ ಡಬಲ್ ಗೇಮ್ ರಾಜಕಾರಣದಿಂದ ಅದಕ್ಕೆ ವಿರೋಧ ವ್ಯಕ್ತವಾಯಿತು. ಈ ನಾಡಿಗೆ ಸಾಕಷ್ಟು ಕೊಡುಗೆ ನೀಡಿರುವ ಮುಲ್ಕಿ ಸುಂದರಾಮ್ ಶೆಟ್ಟಿ ಹೆಸರಿಡಲು ಈ ರೀತಿಯ ರಾಜಕಾರಣ ಬೇಕಾಗಿರಲಿಲ್ಲ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಮುಖಂಡ ಬೋಜೆ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ವಾಸುದೇವ ರಾವ್, ಶಾಲಿನಿ ಶೆಟ್ಟಿ ಕೆಂಚನೂರು, ಮನ್ಸೂರು ಇಬ್ರಾಹಿಂ, ಅನಿತಾ, ಇಸ್ಮಾಯೀಲ್ ಫಲಿಮಾರು ಮೊದಲಾದವರು ಉಪಸ್ಥಿತರಿದ್ದರು.