- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರಾವಳಿಯಲ್ಲಿ ಚುರುಕುಗೊಂಡ ಮೀನುಗಾರಿಕೆ, ಬೆಲೆ ಕಡಿಮೆ ಆಗುವ ಸಾಧ್ಯತೆ

fish [1]ಮಂಗಳೂರು:  ಎರಡು ತಿಂಗಳ ರಜೆಯ ಬಳಿಕ ಮಂಗಳೂರಿನಲ್ಲಿ ಮತ್ಸ್ಯ ಬೇಟೆ ಮತ್ತೆ ಶುರುವಾಗಿದೆ. ಮೀನು ಪ್ರಿಯರ ಬೇಡಿಕೆಯನ್ನು ಪೂರೈಸಲು ಮೀನುಗಾರರು ಉತ್ಸಾಹದಿಂದಲೇ ಸಮುದ್ರಕ್ಕೆ ಇಳಿದಿದ್ದಾರೆ.

ಆಗಸ್ಟ್ 1 ರಿಂದ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಶುರುವಾಗಿದೆ. ಎರಡು ತಿಂಗಳು ಸ್ಥಳೀಯ ಮೀನು ಸಿಗದೇ, ದುಬಾರಿ ಬೆಲೆ ತೆತ್ತು, ಬೇರೆ ರಾಜ್ಯದ ಮೀನುಗಳನ್ನು ಖರೀದಿಸುತ್ತಿದ್ದ ಜನರು, ಇದೀಗ ಸ್ಪಲ್ಪ ನಿರಾಳರಾಗಿದ್ದಾರೆ. ಇನ್ನಾದರೂ ಮೀನಿನ ಬೆಲೆ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಮಳೆಗಾಲದ ಸಂದರ್ಭದಲ್ಲಿ ಕಡಲು ಉದ್ವಿಗ್ನವಾಗುವುದು ಸಹಜ. ಇದರ ಜತೆಗೆ ಮೀನಿನ ಸಂತಾನೋತ್ಪತ್ತಿಗೂ ಇದು ಸಕಾಲ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದಲ್ಲಿ, ಇಡೀ ಮೀನುಗಾರಿಕೆ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಮೀನಿನ ಸಂತತಿಯೇ ಕಡಿಮೆಯಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಜೂನ್‌ 1 ರಿಂದ ಜುಲೈ 31 ರವರೆಗೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮೀನುಗಾರರು, ತಮ್ಮ ದೋಣಿಗಳ ದುರಸ್ತಿ, ಮೀನಿನ ಬಲೆಗಳನ್ನು ಸರಿಪಡಿಸುವುದು ಸೇರಿದಂತೆ ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. 61 ದಿನಗಳ ನಂತರ ಎಲ್ಲ ರೀತಿಯ ಸಿದ್ಧತೆಗಳ ಜತೆಗೆ ಹುಮ್ಮಸ್ಸಿನಿಂದಲೇ ಮೀನುಗಾರಿಕೆಗೆ ತೆರಳುತ್ತಾರೆ.

ಪಶ್ಚಿಮ ಕರಾವಳಿಯ ಸಮುದ್ರದಲ್ಲಿ ಮೀನುಗಾರಿಕೆಗೆ ವಿಪುಲ ಅವಕಾಶಗಳಿವೆ. ಪ್ರತಿ ವರ್ಷ 5.55 ಲಕ್ಷ ಟನ್‌ ಮೀನು ಉತ್ಪಾದನೆ ಮಾಡುವ ಮೂಲಕ ಮೀನುಗಾರಿಕೆಯಲ್ಲಿ ಕರ್ನಾಟಕ 6 ನೇ ಸ್ಥಾನ ಪಡೆದಿದೆ.

ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ಒಟ್ಟು 27 ಸಾವಿರ ಚದುರ ಕಿ.ಮೀ. ಸಮುದ್ರದಲ್ಲಿ ಮೀನುಗಾರಿಕೆ ಸಾಧ್ಯವಾಗಿದೆ. ಒಟ್ಟು 18 ಸಾವಿರ ಮೀನುಗಾರಿಕೆ ಬೋಟ್‌ಗಳನ್ನು ಹೊಂದಿರುವ ರಾಜ್ಯದಲ್ಲಿ, ಒಟ್ಟು 3.28 ಲಕ್ಷ ಜನರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ 1,373 ಗಿಲ್‌ನೆಟ್‌ ಹಾಗೂ 1,102 ಟ್ರಾಲ್‌ ಬೋಟ್‌ಗಳಿವೆ. ಮಲ್ಪೆಯಲ್ಲಿ 1,910 ಗಿಲ್‌ನೆಟ್‌ ಹಾಗೂ 1,713 ಟ್ರಾಲ್‌ ಬೋಟ್‌ಗಳಿವೆ. ಇದರ ಜತೆಗೆ ಗಂಗೊಳ್ಳಿಯಲ್ಲಿ 2,234 ಗಿಲ್‌ನೆಟ್‌ ಮತ್ತು 393 ಟ್ರಾಲ್‌ ಬೋಟ್‌ಗಳು ಕಾರ್ಯಾಚರಣೆ ಮಾಡುತ್ತಿವೆ.

ಇದರ ಜತೆಗೆ ಮಂಗಳೂರಿನಲ್ಲಿ 528 ಹಾಗೂ ಮಲ್ಪೆಯಲ್ಲಿ 848 ನಾಡದೋಣಿಗಳೂ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 66 ಸಾವಿರ ಹಾಗೂ ಉಡುಪಿ ಜಿಲ್ಲೆಯಲ್ಲಿ 1.20 ಲಕ್ಷ ಜನರಿಗೆ ಮೀನುಗಾರಿಕೆಯೇ ಕಸುಬಾಗಿದೆ.