- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಲ್ಲಡ್ಕ ಪ್ರಭಾಕರ್ ಭಟ್ ಸರಕಾರಕ್ಕೆ ಅನ್ನನೀಡಲು ಪತ್ರ ಬರೆದರೆ, ಕೊಡಿಸುವ ಜವಾಬ್ದಾರಿ ನನ್ನದು : ರಮಾನಾಥ ರೈ

Ramanatha Rai [1]ಮಂಗಳೂರು :  ಕಲ್ಲಡ್ಕ ಪ್ರಭಾಕರ್ ಭಟ್ ಇಂದೇ ಒಂದು ಅರ್ಜಿ ನೀಡಿ ಅಕ್ಷರ ದಾಸೋಹ ಯೋಜನೆಯಡಿ ಅನ್ನನೀಡಲು ಪತ್ರ ಬರೆದರೆ, ಆ ಮಕ್ಕಳಿಗೆ ಅನ್ನದಾನದ ವ್ಯವಸ್ಥೆ ಮಾಡುವ ಜವಾಬ್ದಾರಿ ನನ್ನದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷರದಾಸೋಹದಲ್ಲಿ ಎಲ್ಲಾ ಶಾಲೆಗಳಿಗೆ ಸರಕಾರವೇ ಅನ್ನ ನೀಡುತ್ತಿದೆ. ಆದರೆ, ಕಲ್ಲಡ್ಕ ಶಾಲೆಗೆ ಅಕ್ಷರದಾಸೋಹ ಬೇಡ ಎಂದು ಲಿಖಿತವಾಗಿ ಹೇಳಿದವರು ಕಲ್ಲಡ್ಕ ಪ್ರಭಾಕರ ಭಟ್ಟರು. ಹಿಂದಿನ ಸರಕಾರ ನಿಯಮಗಳನ್ನು ಮೀರಿ ಈ ಎರಡು ಶಾಲೆಗಳಿಗೆ ನೆರವು ನೀಡಿದೆ. ಎರಡೂ ಶಾಲೆಗಳಿಗೂ ನಗದು ರೂಪದಲ್ಲಿ ನೆರವು ನೀಡಲಾಗುತ್ತಿತ್ತು ಎಂದರು.

ಧಾರ್ಮಿಕ ದತ್ತಿ ನಿಯಮದಂತೆ ದೇವಸ್ಥಾನಗಳ ವತಿಯಿಂದ ನಡೆಯುವ ಶಾಲೆಗಳನ್ನು ಹೊರತುಪಡಿಸಿ ಇತರೆ ಶಾಲೆಗಳಿಗೆ ಅನುದಾನ ನೀಡುವ ಅವಕಾಶವಿಲ್ಲ. ದೇವಸ್ಥಾನಗಳು ನೀಡುವುದು ಅನುದಾನವಲ್ಲ ನೆರವು. ಸರಕಾರ ನೀಡುವುದು ಅನುದಾನ ಎಂದು  ರೈ ಹೇಳಿದ್ದಾರೆ.

ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರ್ಥಿಕ ಸಂಕಷ್ಟವಿರುವ ಹತ್ತಾರು ಶಾಲೆಗಳಿವೆ. ಆದರೆ, ಆರ್ಥಿಕವಾಗಿ ಬಲಾಢ್ಯವಾಗಿರುವ ಈ ಶಾಲೆಗಳಿಗೆ ನೆರವು ನೀಡಿರುವ ಕುರಿತು ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸುಕುಮಾರ್ ಶೆಟ್ಟಿ ಹಾಗೂ ಬಿಜೆಪಿ ನಾಯಕ ಅಪ್ಪಣ್ಣ ಹೆಗ್ಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳ ಅನ್ನಕ್ಕೆ ಕಲ್ಲು ಹಾಕಿದವರು ನಾವಲ್ಲ, ಕಲ್ಲಡ್ಕ ಶಾಲೆಗೆ ಗಣಿ ಧಣಿ ಶ್ರೀರಾಮ ರೆಡ್ಡಿಯವರಿಂದ ಹಾಗೂ ಬಾಲಿವುಡ್ ನಟರಿಂದಲೂ ದೇಣಿಗೆ ರೂಪದಲ್ಲಿ ಹಣ ಪಡೆಯಲಾಗಿತ್ತು. ಇಲ್ಲಿಯ ಪ್ರಾಥಮಿಕ ಶಾಲೆ ಅನುದಾನ ರಹಿತವಾಗಿದ್ದು, ಪ್ರೌಢಶಾಲೆಗೆ ಅನುದಾನವಿದೆ. ಹೀಗಿರುವಾಗ ಇದೇ ಶಾಲೆಗೆ ಮತ್ತಷ್ಟು ನೆರವು ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಸರಕಾರವೇ ಶೂ ಭಾಗ್ಯ, ಪುಸ್ತಕ ಭಾಗ್ಯ, ಸಮವಸ್ತ್ರದ ಭಾಗ್ಯ ನೀಡುತ್ತಿರುವಾಗ ವಿದ್ಯಾರ್ಥಿಗಳು ಆ ಶಾಲೆಗಳಿಗೆ ಸೇರಲಿ ಎಂದರು.

ಧನರೂಪದಲ್ಲಿ ಹಣ ಪಡೆದರೆ ದುರುಪಯೋಗ ಪಡಿಸಲು ಸುಲಭವಾಗುತ್ತದೆ ಎಂದ ಅವರು, ಕಲ್ಲಡ್ಕ ಪ್ರಭಾಕರ ಭಟ್ಟರು ಜನತೆಯ ಹಾದಿ ತಪ್ಪಿಸುತ್ತಿದ್ದಾರೆ. ಮಕ್ಕಳ ಊಟಕ್ಕಾಗಿ ಭಿಕ್ಷೆ ಬೇಡಿ ಹಣ ಮಾಡಲು ಹೊರಟಿದ್ದಾರೆ. ಇಲ್ಲಿಯತನಕ ಇಲ್ಲಿ ನೀಡಿರುವ ಹಣ ದುರುಪಯೋಗವಾಗಿರುವ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದರು.

ಮಕ್ಕಳನ್ನು ತಟ್ಟೆ ಸಹಿತ ಬೀದಿಗೆ ತಂದಿದ್ದಾರೆ. ಪ್ರತಿಭಟನೆಯಲ್ಲಿ ಸರಕಾರದ ವೇತನ ಪಡೆಯುವ ಶಿಕ್ಷಕರೂ ಪಾಲ್ಗೊಂಡಿದ್ದಾರೆ. ಈ ಬಗ್ಗೆಯೂ ಕ್ರಮಕೈಗೊಳ್ಳಲಾಗುವುದು ಎಂದರು. ಅನುದಾನ ಸ್ಥಗಿತಗೊಳಿಸುವ ಬಗ್ಗೆ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ವಿರೋಧಿಸಿದ್ದಾರೆ ಎಂಬ ಪ್ರಶ್ನೆಗೆ ಅವರಿಗೆ ಈ ಎಲ್ಲಾ ಮಾಹಿತಿ ಇಲ್ಲದಿರಬಹುದು. ಅವರಿಗೆ ಈ ಬಗ್ಗೆ ಸರಿಯಾದ ಚಿತ್ರಣ ನೀಡುತ್ತೇನೆ ಎಂದರು.