- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೇರಿ ಮಾತೆಯ ಜನ್ಮದಿನದ ಪ್ರತೀಕವಾಗಿ ತೆನೆ ಹಬ್ಬ ಆಚರಿಸಿದ ಕ್ರೈಸ್ತ ಭಾಂಧವರು

Monti Fest [1]ಮಂಗಳೂರು: ಮೇರಿ ಮಾತೆಯ ಜನ್ಮದಿನದ ಪ್ರತೀಕವಾಗಿ ಮೊಂತಿ ಫೆಸ್ಟ್ (ತೆನೆ ಹಬ್ಬ) ವನ್ನು  ಕರಾವಳಿ ಭಾಗದ ಕ್ರೈಸ್ತ ಭಾಂಧವರು ಅತ್ಯಂತ ಶ್ರದ್ಧೆಯಿಂದ ಆಚರಿಸಿದರು.

ಪ್ರತಿ ವರ್ಷ ತೆನೆ ಹಬ್ಬ ಸೆಪ್ಟಂಬರ್ ತಿಂಗಳಲ್ಲಿ 8 ಬರುತ್ತದೆ. ಈ ಸಮಯದಲ್ಲಿ ಮಳೆಗಾಲದ ಕೊನೆಯಾಗುತ್ತಿದ್ದು, ಪ್ರಕೃತಿಯ ಹಚ್ಚ ಹಸಿರಿನಿಂದ ಕಂಗೊಳಿಸಿರುತ್ತದೆ.

ಭತ್ತದ ಹೊಸ ತೆನೆಯನ್ನು ಕೊಯ್ದು ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಬಳಿಕ ಅಲ್ಲಿ ಆಶೀರ್ವದಿಸಿ ನಂತರ ಮನೆಗೆ ತಂದು ಆ ಅಕ್ಕಿಯನ್ನು ಸುಲಿದು ಪಾಯಸ ಮಾಡಿ ಕುಟುಂಬದ ಎಲ್ಲಾ ಸದಸ್ಯರು ಸವಿಯುವುದೇ ಈ ಹಬ್ಬದ ವೈಶಿಷ್ಟ್ಯವಾಗಿದೆ.

Monti Fest [2]ದೇವರಿಗೆ ಸಮರ್ಪಿಸಿ ಬಳಿಕ ಎಲ್ಲರೂ ಒಟ್ಟಿಗೆ ಕುಳಿತು ಸಂಭ್ರಮದಿಂದ ತಿನ್ನುವ ಪದ್ದತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಸಂಪ್ರದಾಯ ಹಿಂದೂ ಧರ್ಮಿಯರಲ್ಲಿ ಮಾತ್ರವಲ್ಲದೆ ಇಲ್ಲಿಯ ಕ್ರೈಸ್ತ ಧರ್ಮೀಯರೂ ಆಚರಿಸಿಕೊಂಡು ಬರುತ್ತಿದ್ದಾರೆ.

ಕರಾವಳಿಯಲ್ಲಿ ಎಲ್ಲಾ ಧರ್ಮದವರೂ ಕೃಷಿಗೆ ಪ್ರಾಧಾನ್ಯತೆ ನೀಡುವ, ಪ್ರಕೃತಿ ಪೂಜೆ ಸಲ್ಲಿಸುವ ಸಂಪ್ರದಾಯ ಹಿಂದಿನಿಂದಲೂ ಆಚರಣೆಯಲ್ಲಿದೆ. ಮೊಂತಿ ಫೆಸ್ಟ್ ಕೂಡಾ ಇಂಥದ್ದೇ ಒಂದು ಪ್ರಕೃತಿ ಪೂಜೆ. ಭೂ ಮಾತೆಗೆ ಕೃತಜ್ಞತೆ ಸಲ್ಲಿಸುವ ಹಬ್ಬ. ಸುಗ್ಗಿಯ ಸಂದರ್ಭದಲ್ಲಿ ಬರುವ ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸಿ ಬಳಿಕ ಕುಟುಂಬದವರೆಲ್ಲರೂ ಸವಿಯುವುದೇ ಹಬ್ಬದ ಹಿರಿಮೆ.

ಹಬ್ಬಕ್ಕೆ ಒಂಭತ್ತು ದಿನಗಳ ಮುನ್ನವೇ ಮಕ್ಕಳು ಬುಟ್ಟಿಯಲ್ಲಿ ಹೂಗಳನ್ನು ತೆಗೆದುಕೊಂಡು ಹೋಗಿ ಮೇರಿ ಮಾತೆಯ ಮೂರ್ತಿಯನ್ನು ಅಲಂಕರಿಸುತ್ತಾರೆ. ಹೂಗಳಿಂದಲೇ ಮಾತೆಗೆ ಅರ್ಚನೆ ಸಲ್ಲುತ್ತದೆ. ಮೊಂತಿ ಹಬ್ಬದ ದಿನ ಮೆರವಣಿಗೆಯ ಮೂಲಕ ಭತ್ತದ ತೆನೆಯನ್ನು ಭಕ್ತರು ದೇವರಿಗೆ ಅರ್ಪಿಸುತ್ತಾರೆ. ಅಲ್ಲಿ ಧರ್ಮಗುರುಗಳು ಆಶೀರ್ವದಿಸುತ್ತಾರೆ. ಅದೇ ತೆನೆಯನ್ನು ಪ್ರತಿಯೊಬ್ಬರು ತಮ್ಮ ಮನೆಗಳಿಗೆ ಕೊಂಡೊಯ್ದು ದೇವರ ಪೀಠದ ಬಳಿ ಇರಿಸುತ್ತಾರೆ.