- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಧಿಕಾರಿಗಳ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಆಡಳಿತ ಕ್ರಮ : ಡಿ.ವಿ.ಎಸ್

DVS/ಮುಖ್ಯಮಂತ್ರಿ ಡಿ.ವಿ.ಎಸ್ [1]

ಮಂಗಳೂರು: ಉಡುಪಿ ಜಿಲ್ಲೆಯ ಪ್ರವಾಸಕ್ಕೆ ಆಗಮಿಸಿರುವ ಮುಖ್ಯಮಂತ್ರಿಗಳು ಶನಿವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದಿನ ವಾರದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಹಿಡಿದು ತಹಶೀಲ್ದಾರ್‌ ವರೆಗಿನ ಅಧಿಕಾರಿಗಳ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಿ, ಕೆಲವೇ ದಿನಗಳಲ್ಲಿ ರಾಜ್ಯದ ಆಡಳಿತ ಯಂತ್ರಕ್ಕೆ ವೇಗ ನೀಡಲಾಗುವುದು ಎಂದು ಅವರು ಹೇಳಿದರು.

ಈವರೆಗೆ 20 ಇಲಾಖೆಗಳ ಪ್ರಗತಿ ಕುರಿತಂತೆ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಯಾವುದೇ ಕಾರ್ಯಗಳಿದ್ದರೂ ಅದನ್ನು ಜಾರಿಗೊಳಿಸುವವರು ಕೆಳಗಿನ ಅಧಿಕಾರಿಗಳು. ಹಾಗಾಗಿ ಅವರೊಂದಿಗೆ ನೇರ ಸಂಪರ್ಕ ಹೊಂದಲಾಗುವುದು ಎಂದು ಅವರು ಹೇಳಿದರು.

ತಳಮಟ್ಟದಲ್ಲಿ ಕಡತ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವುದು ಭ್ರಷ್ಟಾಚಾರಕ್ಕೆ ಕಾರಣ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗಾಗಿ ಕೆಳಮಟ್ಟದಲ್ಲಿ ಆಡಳಿತ ಉತ್ತಮಪಡಿಸಲು ಪ್ರಯತ್ನಿಸಲಾಗುವುದು. ಯಶಸ್ವಿಯಾಗುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.

ಶುಕ್ರವಾರ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಇಲಾಖೆ ಕುರಿತಂತೆ ಸಮಗ್ರ ಚರ್ಚೆ ನಡೆಸಲಾಗಿದೆ. ಅಧಿಕಾರಿಗಳಲ್ಲಿ ಆತ್ಮ ವಿಶ್ವಾಸ ವೃದ್ಧಿಸಲು ಅಗತ್ಯವಾದ ಕ್ರಮಗಳ ಬಗ್ಗೆ ಚಿಂತಿಸಲಾಗಿದೆ. ಜತೆಯಲ್ಲಿ ಇಲಾಖೆಯಿಂದ ಸರಕಾರವೂ ಸಾಕಷ್ಟು ನಿರೀಕ್ಷೆಯನ್ನು ಇರಿಸಿಕೊಂಡಿದೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ಡಿವಿಎಸ್‌ ಹೇಳಿದರು.

ತುಮಕೂರು ಹಾಗೂ ಚಿತ್ರದುರ್ಗಗಳಲ್ಲಿನ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್‌ ನೇಮಿಸಿದ ಸಿಇಸಿ ನೀಡಿರುವ ವರದಿಯ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಜರಗಿಸಲು ಮಂಗಳವಾರ ಅಧಿಕಾರಿಗಳ ಸಭೆ ಕರೆಯಲಾಗಿದೆ.

ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಇಲಾಖೆ ಅಧಿಕಾರಿಗಳು, ಕಾನೂನು ತಜ್ಞರು, ಕಾನೂನು ಸಚಿವರು ಎಲ್ಲರೂ ಸೇರಿ ವಿಷಯವನ್ನು ಸಮಗ್ರವಾಗಿ ಚರ್ಚಿಸಲಾಗುವುದು. ಮುಂದಿನ ಕ್ರಮದ ಬಗ್ಗೆಯೂ ಚಿಂತಿಸಲಾಗುವುದು ಎಂದು ನುಡಿದರು.

ಖಾಸಗಿ ವಿಶೇಷ ವಿಮಾನದಲ್ಲಿ ಬಜಪೆ ವಿಮಾನ ನಿಲ್ದಾಣದಲ್ಲಿ ಪತ್ನಿ, ಪುತ್ರನೊಂದಿಗೆ ಬಂದಿಳಿದ ಮುಖ್ಯಮಂತ್ರಿಗಳನ್ನು ಉನ್ನತ ಶಿಕ್ಷಣ ಸಚಿವ ಡಾ| ವಿ.ಎಸ್‌. ಆಚಾರ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಬಂದರು ಖಾತೆ ಸಚಿವ ಆನಂದ ಅಸ್ನೋಟಿಕರ್‌, ವಿಧಾನಸಭಾ ಉಪ ಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌, ಸಂಸದ ನಳಿನ್‌ಕುಮಾರ್‌ ಕಟೀಲು, ರಾಜ್ಯ 3ನೇ ಹಣಕಾಸು ಆಯೋಗ ಶಿಫಾರಸು ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ. ಕೊಡ್ಗಿ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾ| ಗಣೇಶ ಕಾರ್ಣಿಕ್‌, ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಮೇಯರ್‌ ಪ್ರವೀಣ್‌ ಮತ್ತಿತರರು ಸ್ವಾಗತಿಸಿದರು.