- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಸ್ಥಾನಕ್ಕೆ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವಿರೋಧ ಆಯ್ಕೆ

rajendra kumar [1]ಮಂಗಳೂರು: ಜಾತಿ, ಧರ್ಮ, ಭಾಷೆಯನ್ನು ಮೀರಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ಇದ್ದರೂ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಹಕಾರ ಮಾರಾಟ ಮಹಾಮಂಡಳದ ಅವರೇ ಆ ಸ್ಥಾನಕ್ಕೆ ಸಮರ್ಥರು ಎಂಬುದು ಸಾಬೀತಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ನೆರವೇರಿಸಿ ಅವರು ಮಾತನಾಡಿದರು. ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಕೇಂದ್ರ ಸಹಕಾರಿ ಬ್ಯಾಂಕ್(ಎಸ್‌ಸಿಡಿಸಿಸಿ) ಸಭಾಂಗಣದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳ ಪರವಾಗಿ ಡಾ. ರಾಜೇಂದ್ರ ಕುಾರ್ ಅವರನ್ನು ಅಭಿನಂದಿಸಲಾಯಿತು.

Rajendra kumar [2]ಮಹಾಮಂಡಳದ ಅಧ್ಯಕ್ಷ ಸ್ಥಾನ ಪ್ರತಿಷ್ಠೆಯ ಹುದ್ದೆ. ಸಹಕಾರಿ ಕ್ಷೇತ್ರದ ಮೇರು ವ್ಯಕ್ತಿಯಾಗಿರುವ ರಾಜೇಂದ್ರ ಕುಮಾರ್ ಮೂಲಕ ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಬದಲಾವಣೆಯಾಗುವ ನಿರೀಕ್ಷೆಯಿದೆ. ಸಮಸ್ಯೆಯ ಜಟಿಲತೆಯನ್ನು ಬಿಡಿಸುವ ನೈಪುಣ್ಯತೆ ಅವರಲ್ಲಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಆದ್ಯತೆ ನೀಡುವ ವಿಶ್ವಾಸವಿದೆ. ಉಬಯ ಜಿಲ್ಲೆಗಳ ಸಹಕಾರ ಕ್ಷೇತ್ರದ ಮೇರು ವ್ಯಕ್ತಿತ್ವಹೊಂದಿರುವ ರಾಜೇಂದ್ರ ಕುಮಾರ್ ಮೂಲಕ ಸಹಕಾರ ಕ್ಷೇತ್ರ ಇನ್ನಷ್ಟು ಬಲಿಷ್ಠವಾಗಲಿ ಎಂದು ಸಚಿವ ರೈ ಶುಭ ಹಾರೈಸಿದರು.

ಸಮಾರಂಭದಲ್ಲಿ ಭಾಗವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಮಾಜದಲ್ಲಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಬೆರೆಯುತ್ತ, ಸಾಮಾಜಿಕ ಮತ್ತು ಸಹಕಾರಿ ರಂಗದಲ್ಲಿ ನಕ್ಷತ್ರವಾಗಿ ಮಿನುಗುತ್ತಿರುವವರು ಎಂ.ಎನ್.ರಾಜೇಂದ್ರ ಕುಮಾರ್. ಅವರಿಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಗಾದಿ ಅರ್ಹವಾಗಿ ದೊರಕಿದೆ ಎಂದರು. ಸಹಕಾರಿ ರಂಗದ ಅದ್ಭುತ ಶಕ್ತಿ ರಾಜೇಂದ್ರ ಕುಮಾರ್. ಮುಂದಿನ ದಿನಗಳಲ್ಲಿ ವಿಧಾನಪರಿಷತ್‌ಗೆ ಸಹಕಾರಿ ರಂಗದಿಂದಲೂ ಪ್ರತಿನಿಧಿಗಳು ಬರುವಂತಾ ಗಬೇಕು. ಸಹಕಾರಿ ರಂಗದ ಮೊದಲ ವಿಧಾನಪರಿಷತ್ ಸದಸ್ಯ ರಾಜೇಂದ್ರ ಕುಮಾರ್ ಆಗಬೇಕು ಎಂದು ನಳಿನ್ ಕುಮಾರ್ ಆಶಯ ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ಶಾಸಕ ಜೆ.ಆರ್. ಲೋಬೋ ವಹಿಸಿದ್ದರು.

Rajendra kumar [3]ವೇದಿಕೆಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಡಾ. ರಾಜೇಂದ್ರ ಕುಮಾರ್‌ರವರ ಪತ್ನಿ ಅರುಣಾ ರಾಜೇಂದ್ರ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಕೆಎಂಎಫ್‌ನ ಕೆ. ರವಿರಾಜ್ ಹೆಗಡೆ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮಾಸ್ ಮಂಗಳೂರು ಅಧ್ಯಕ್ಷ ಶ್ರೀಧರ ಭಿಡೆ, ಸ್ಕ್ವಾಡ್ಸ್ ಮಂಗಳೂರು ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ, ಸರಳಾ ಕಾಂಚನ್, ಲಕ್ಷ್ಮೀ ನಾರಾಯಣ, ಸತೀಶ್ ಎಸ್ ಹಾಗೂ ಇತರರು ಉಪಸ್ಥಿತರಿದ್ದರು.

ಅಧ್ಯಕ್ಷನಾಗಿ ಐದು ವರ್ಷಗಳಲ್ಲಿ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಒತ್ತು ನೀಡುತ್ತೇನೆ. ರಾಜಕೀಯ ಕ್ಷೇತ್ರ ನನಗೆ ಬೇಡ, ಸಹಕಾರಿ ಕ್ಷೇತ್ರದಲ್ಲಿದ್ದುಕೊಂಡೇ ಈ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಅಭಿನಂದನೆ ಸ್ವೀಕರಿಸಿದ ಡಾ.ಎಂ.ಎ್.ರಾಜೇಂದ್ರ ಕುಮಾರ್ ಹೇಳಿದರು.

ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವಂತಾಗಬೇಕು. ಸರಿಯಾದ ಮಾರುಕಟ್ಟೆ ಒದಗಿಸುವ ಮೂಲಕ ಎಲ್ಲೂ ಲೋಪವಾಗದಂತೆ ಎಚ್ಚರವಹಿಸು ತ್ತೇನೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗೋದಾಮುಗಳಲ್ಲಿ ಕೃಷಿಗೆ ಗೊಬ್ಬರ ಸಮಸ್ಯೆಯನ್ನು ರೈತರು ಎದುರಿಸುತ್ತಾರೆ. ಮಧ್ಯವರ್ತಿಗಳಿಂದಾಗಿ ರೈತರು ಸಂಕಷ್ಟ ಪಡುವ ಸ್ಥಿತಿಯೂ ಇದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ರೈತರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದವರು ಹೇಳಿದರು.

ಮಹಾಮಂಡಳದ ಅಧ್ಯಕ್ಷರ ಆಯ್ಕೆಯ ವೇಳೆ ನಡೆದ ರಾಜಕೀಯ ಬೆಳವಣಿಗೆಯನ್ನು ಕಂಡಾಗ ನಮ್ಮ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಕಂಡು ಕೊಂಡೆ. ಒಂದು ಜಾತಿ ಪಂಗಡ ತಮ್ಮದೇ ಸಮುದಾಯದ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಸಿಗಬೇಕೆಂದು ಇನ್ನಿಲ್ಲದ ಕಸರತ್ತು ನಡೆಸಿತ್ತು. ಆದರೆ ಇವೆಲ್ಲದರ ನಡುವೆ ಆಯ್ಕೆಯಾಗಿದ್ದೇನೆ. ಸಾಮಾನ್ಯ ಅಲ್ಪಸಂಖ್ಯಾತನೂ ಅಧ್ಯಕ್ಷನಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಸಹಕಾರಿ ಕ್ಷೇತ್ರವೇ ಪವಿತ್ರ. ಇದರಲ್ಲಿಯೇ ನನಗೆ ಖುಷಿಯಿದೆ. ರಾಜಕೀಯ ಕ್ಷೇತ್ರ ಪ್ರವೇಶಿಸುವುದಿಲ್ಲ ಎಂದು ರಾಜೇಂದ್ರ ಕುಮಾರ್ ನುಡಿದರು.