- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರಧಾನ ಮಂತ್ರಿಯವರ ಮುದ್ರಾ ಯೋಜನೆ ಕುರಿತಂತೆ ಸಮಗ್ರ ಮಾಹಿತಿ ಅಭಿಯಾನ :ಸಂಸದ ನಳಿನ್

mudra yojan [1]ಮಂಗಳೂರು: ಅ.16ರಂದು ನಗರದ ಪುರಭವನದಲ್ಲಿ ಪ್ರಧಾನ ಮಂತ್ರಿಯವರ ಮುದ್ರಾ ಯೋಜನೆ ಕುರಿತಂತೆ ಸಮಗ್ರ ಮಾಹಿತಿಯನ್ನು ನೀಡುವ ಜತೆಗೆ ಕೇಂದ್ರ ಸರಕಾರದ ವಿವಿಧ ಸಾಲ ಸೌಲಭ್ಯಗಳ ಕುರಿತಂತೆ ಮಾಹಿತಿ ಒದಗಿಸುವ ವಿಶೇಷ ಅಭಿಯಾನ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.

ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರದ ಕೌಶಲಾಭಿವೃದ್ಧಿ ಸಚಿವ ಅನಂತ ಹೆಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ದ.ಕ. ಜಿಲ್ಲೆಯಲ್ಲಿ ಮುದ್ರಾ ಯೋಜನೆಯಡಿ ಈಗಾಗಲೇ 59,408 ಫಲಾನುಭವಿಗಳಿಗೆ 748.95 ಕೋಟಿ ರೂ.ಗಳನ್ನು ವಿವಿಧ ಬ್ಯಾಂಕ್‌ಗಳ ಮೂಲಕ ಒದಗಿಸಲಾಗಿದೆ. ಸಣ್ಣ ಉದ್ದಿಮೆಗಳಿಗೆ ಆರ್ಥಿಕ ಸಹಾಯ ಮತ್ತು ಸ್ವ ಉದ್ಯೋಗ ಕಲ್ಪಿಸುವ ಮಹತ್ವಪೂರ್ಣ ಯೋಜನೆ ಇದಾಗಿದ್ದು, ಜಿಲ್ಲೆಯೂ ಕೇಂದ್ರ ಸರಕಾರದ ಜನಧನ್ ಯೋಜನೆ ಅನುಷ್ಠಾನ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲೂ ಮುಂಚೂಣಿಯಲ್ಲಿದೆ ಎಂದವರು ತಿಳಿಸಿದರು.

ಹಾಗಿದ್ದರೂ ಮಾಹಿತಿಯ ಕೊರತೆಯಿಂದಾಗಿ ಕೇಂದ್ರ ಸರಕಾರದ ವಿವಿಧ ಉದ್ಯೋಗಾಧಾರಿತ, ಉದ್ಯಮಾಧಾರಿತ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ, ದೊರೆಯುತ್ತಿಲ್ಲ ಎಂಬ ದೂರುಗಳಿರುವ ಹಿನ್ನೆಲೆಯಲ್ಲಿ ಈ ವಿಶೇಷ ಅಭಿಯಾನ ಆಯೋಜಿಸಲಾಗಿದೆ. ಅಭಿಯಾನದಲ್ಲಿ ಮುದ್ರಾ ಯೋಜನೆಯ ಅರ್ಜಿ ಫಾರಂಗಳನ್ನು ಕೂಡಾ ಸಾರ್ವಜನಿಕರಿಗೆ ವಿತರಿಸಲಾಗುವುದು. ಯೋಜನೆಯ ಅರ್ಜಿಯನ್ನು ಸ್ಥಳದಲ್ಲೇ ವಿವಿಧ ಬ್ಯಾಂಕ್‌ಗಳು ಸ್ವೀಕರಿಸಲಿವೆ. ಇದಲ್ಲದೆ ಬ್ಯಾಂಕ್‌ಗಳಲ್ಲಿ ದೊರೆಯುವ ಶೈಕ್ಷಣಿಕ ಸಾಲ, ಮನೆ ನಿರ್ಮಾಣಕ್ಕೆ ದೊರಕುವ ಪ್ರಧಾನಮಂತ್ರಿ ಆವಾಸ್ ಯೋಜನೆ ಸಬ್ಸಿಡಿ ಅರ್ಜಿಗಳೂ ಸ್ಥಳದಲ್ಲಿ ವಿತರಣೆಯಾಗಲಿವೆ. ಬ್ಯಾಂಕ್ ಖಾತೆದಾರರಿಗೆ ಆಧಾರ್ ಸೀಡಿಂಗ್ ಹಾಗೂ ಮೊಬೈಲ್ ಸಂಖ್ಯೆ ಜೋಡಣೆಯ ಸೌಲಭ್ಯವನ್ನೂ ಈ ಅಭಿಯಾನದಲ್ಲಿ ಒದಗಿಸಲಾಗುತ್ತಿದೆ ಎಂದು ನಳಿನ್ ವಿವರ ನೀಡಿದರು.

ಜನಧನ್ ಯೋಜನೆಯು ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನವಾಗಿದ್ದರೂ, ಸಾರ್ವಜನಿಕರಿಗೆ ಮಾಹಿತಿಯ ಕೊರತೆಯಿಂದ ಸಾವಿರಾರು ಖಾತೆಗಳು ನಿಸ್ತೇಜಗೊಂಡಿವೆ. ಕಿಸಾನ್ ಕಾರ್ಡ್ ಉಪಯೋಗದ ಬಗ್ಗೆ ಮಾಹಿತಿ ಇಲ್ಲವಾಗಿದೆ. ಹಾಗಾಗಿ ಅಭಿಯಾನದಲ್ಲಿ ಬ್ಯಾಂಕ್ ಸಂಬಂಧಿತ ಕೇಂದ್ರ ಸರಕಾರದ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಉಪ ಕಾರ್ಯದರ್ಶಿ ಉಮೇಶ್, ದ.ಕ. ಜಿಲ್ಲಾ ಲೀಡ್ ಬ್ಯಾಂಕ್‌ನ ಮುಖ್ಯಸ್ಥ ರಾಘವ ಯಜಮಾನ್ಯ ಉಪಸ್ಥಿತರಿದ್ದರು.