- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಸಾಹತುಶಾಹಿ ಆಡಳಿತ ಕಾಲದ ವಿಶ್ವವಿದ್ಯಾನಿಲಯ ಕಾಲೇಜಿನ 149 ವರ್ಷಗಳ ಸಾರ್ಥಕ ಸೇವೆ

university collage [1]ಮಂಗಳೂರು: ವಸಾಹತುಶಾಹಿ ಆಡಳಿತ ಕಾಲದಲ್ಲಿ (1860ರಲ್ಲಿ) ಮಂಗಳೂರಿನ ನಾಗರಿಕರ ದೂರದೃಷ್ಟಿ, ಸಮಾಜಮುಖಿ ಚಿಂತನೆಯ ಫಲವಾಗಿ ಅಸ್ತಿತ್ವಕ್ಕೆ ಬಂದ ಅಂದಿನ ಸರಕಾರಿ ಕಾಲೇಜು ಈ ಸೆಪ್ಟೆಂಬರ್‌ಗೆ 149 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿದೆ. ವಿಶ್ವವಿದ್ಯಾನಿಲಯ ಕಾಲೇಜಿಗೆ 150ರ ಸಂಭ್ರಮ.

ಡಾ. ಶಿವರಾಮ ಕಾರಂತ, ಡಾ. ಎಂ.ವೀರಪ್ಪ ಮೊಯ್ಲಿ, ಡಾ. ಮನಮೋಹನ್ ಅತ್ತಾವರ, ಮಂಜೇಶ್ವರ ಗೋವಿಂದ ಪೈ, ಎ.ಬಿ.ಶೆಟ್ಟಿ, ಯು.ಪಿ.ಮಲ್ಯ, ವೈಕುಂಠ ಬಾಳಿಗ, ಕಮಲಾದೇವಿ ಚಟ್ಟೋಪಾಧ್ಯಾಯ, ಬಿ.ರಮಾನಾಥ ರೈ, ವಿಜಯಕುಮಾರ್ ಶೆಟ್ಟಿ, ಪಿ.ಎಂ.ಸಯೀದ್, ವಿನಯಕುಮಾರ್ ಸೊರಕೆ, ಡಿ.ಕೆ.ಚೌಟ… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಸಮಾಜದ ವಿವಿಧ ರಂಗಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಸಾಧಕರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಮಂಗಳೂರು ಸರಕಾರಿ ಕಾಲೇಜಿನದ್ದು.

university collage [2]ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಭೈರಪ್ಪ ಹಾಗೂ ವೀರಪ್ಪ ಮೊಯ್ಲಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಐತಿಹಾಸಿಕ ವಿವರವನ್ನು ನೀಡಿದರು. ಆಗಿನ ಕಾಲದಲ್ಲಿ ಕರಾವಳಿ ಭಾಗದ ಜನರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮದರಾಸಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಇಲ್ಲಿನವರಿಗೆ ಶಿಕ್ಷಣ ಕನಸಿನ ಗಂಟು. ಇಲ್ಲೊಂದು ಕಾಲೇಜು ತೆರೆಯಲೇಬೇಕೆಂಬ ಹಟಕ್ಕೆ ಬಿದ್ದವರು ಮಹನೀಯರಾದ ಎಂ.ರಾಮಪ್ಪ, ಶ್ರೀನಿವಾಸ್ ರಾವ್, ರಾಮಚಂದ್ರಯ್ಯ, ಎನ್.ಗುಂಡೂರಾವ್, ಎನ್.ತಿಮ್ಮಪ್ಪಯ್ಯ, ಸಾದಾತ್ ಖಾನ್, ಸಿ.ರಂಗಪ್ಪ, ನಾರಾಯಣ ಪೈ, ಸ್ವಾಮಿ ಅಯ್ಯರ್ ಸಾರ್ವಜನಿಕರಿಗೆ ಸಂಗ್ರಹಿಸಿದ 65,000ರೂ. ದೇಣಿಗೆಯನ್ನು ಅಂದಿನ ಮದರಾಸು ಸರಕಾರಕ್ಕೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥರಾಗಿದ್ದ ಪಾವೆಲ್ ಈ ವಿದ್ಯಾಸಂಸ್ಥೆಯನ್ನು ಮಂಜೂರುಗೊಳಿಸಿದರು. 315 ವಿದ್ಯಾರ್ಥಿಗಳಿಂದ ಆರಂಭಗೊಂಡ ಪ್ರಾಂತೀಯ ಶಾಲೆ, 1870ರಲ್ಲಿ ತನ್ನದೇ ಸ್ವಂತ ಕಟ್ಟಡವನ್ನು ಹೊಂದಲು ಶಕ್ತವಾಯಿತು. 1879ರಲ್ಲಿ ಸರಕಾರಿ ಕಾಲೇಜು ಮಂಗಳೂರು ಎಂದು ನಾಮಕರಣಗೊಂಡಿತು. ಹಲವಾರು ಏಳುಬೀಳುಗಳನ್ನು ಕಂಡ ಸಂಸ್ಥೆಯಲ್ಲಿ 1902ರಲ್ಲಿ ಹುಡುಗಿಯರಿಗೆ ಪ್ರಥಮ ಬಾರಿಗೆ ಪ್ರವೇಶ ನೀಡಲಾಯಿತು.

university collage [3]ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ 1922ರಲ್ಲಿ ಈ ಸಂಸ್ಥೆಗೆ ನೀಡಿದ ಭೇಟಿಯ ಸ್ಮರಣಾರ್ಥ ನಿರ್ಮಿಸಲಾದ ವಿಶಿಷ್ಟ ವಾಸ್ತುವಿನ್ಯಾಸದ `ಅಕಾಡೆಮಿ ಹಾಲ್’ 1996ರಲ್ಲಿ ರವೀಂದ್ರ ಕಲಾಭವನ ಎಂದು ಪುನರ್ ನಾಮಕರಣಗೊಂಡಿತು. 2015ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವೆಂದು ಪರಿಗಣಿಸಿ 1.83ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಮಾಡಿದೆ. ಸಭಾಭವನದ ಪುನಶ್ಚೇತನ ಕಾರ್ಯ ಪ್ರಗತಿಯಲ್ಲಿದ್ದು, ಇದೇ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಾಲ್ಕು ಸ್ನಾತಕ ಹಾಗೂ ಐದು ಸ್ನಾತಕೋತ್ತರ ವಿಭಾಗಗಳಿದ್ದು, 1800ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 2016ರಿಂದ 170 ಮಂದಿ ಬಡ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದಿಂದ ಉಚಿತ ಊಟ ನೀಡಲಾಗುತ್ತಿದೆ. ಇದೀಗ 150ನೇ ವರ್ಷದ ಸಂಭ್ರಮದಲ್ಲಿರುವ ಸಂಸ್ಥೆಯಲ್ಲಿ ಎಲ್ಲರಿಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಪ್ರೊ. ಭೈರಪ್ಪ ತಿಳಿಸಿದ್ದಾರೆ.