- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

kavitha sanil [1]ಮಂಗಳೂರು:ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಜೆ.ಆರ್.ಲೋಬೋ ಹಾಗೂ ಮೇಯರ್ ಕವಿತಾ ಸನಿಲ್ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5.14 ಕೋ.ರೂ. ವೆಚ್ಚದಲ್ಲಿ  ಶಿಲಾನ್ಯಾಸ ನಡೆಸಿದರು.

ಲೇಡಿಹಿಲ್ ವೃತ್ತ ಅಭಿವೃದ್ದಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು, ಮಂಗಳೂರು ನಗರ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 2,500 ಕೋ.ರೂ., ಅನುದಾನ ಬೇರೆ ಬೇರೆ ಮೂಲಗಳಿಂದ ಲಭ್ಯವಾಗಲಿದೆ ಹಾಗೂ ವಿವಿಧ ಮೂಲಗಳಿಂದ ವಿವಿಧ ಯೋಜನೆಗಳಿಗಾಗಿ ಅನುದಾನ ದೊರೆಯಲಿದೆ. ಹೀಗಾಗಿ ಮುಂದಿನ ಮೂರು ವರ್ಷದಲ್ಲಿ ಮಂಗಳೂರು ನಗರದ ಸಮಗ್ರ ಚಿತ್ರಣವೇ ಬದಲಾಗಲಿದೆ ಎಂದರು.

ಉಳಿದಂತೆ ನದಿ ತೀರದ ಅಭಿವೃದ್ಧಿ ಯೋಜನೆ, ನಗರದೊಳಗೆ ರಸ್ತೆ, ಚರಂಡಿ ಅಭಿವೃದ್ದಿ ಸೇರಿದಂತೆ ಬೇರೆ ಬೇರೆ ಯೋಜನೆಗಳನ್ನು ಜಾರಿಗೊಳಿಸಲಾಗು ವುದು. ಮೇಯರ್ ಕವಿತಾ ಸನಿಲ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದ್ದು, ಮಂಗಳೂರು ರಾಜ್ಯ ಹಾಗೂ ರಾಷ್ಟ್ರದಲ್ಲಿ ಮಾದರಿ ನಗರವಾಗಿಸುವ ಗುರಿ ಹೊಂದಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಕವಿತಾ ಸನಿಲ್, 175 ಕೋ.ರೂ.ಗಳ ಪ್ರೀಮಿಯರ್ ಎಫ್ಐಆರ್ ಯೋಜನೆಯ ಪೈಕಿ ಪ್ರಸ್ತುತ 5.14 ಕೋ.ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸಲಾಗುತ್ತಿದೆ. ಮುಂದಿನ ವಾರ ಮತ್ತೆ 5 ಕೋ.ರೂ. ಮೊತ್ತದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನಡೆಸಲಾಗುವುದು. ಈ ಮೂಲಕ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಎಲ್ಲಾ ವೃತ್ತಗಳನ್ನು ಅತ್ಯಂತ ನವೀನ ಮಾದರಿಯಲ್ಲಿ ಸುಂದರೀಕರಣಗೊಳಿಸಲಾಗುತ್ತದೆ. ನಗರದ ಫುಟ್‌ಪಾತ್ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಲಾಗಿದೆ ಎಂದರು.

ಮನಪಾ ಉಪಮೇಯರ್ ರಜನೀಶ್, ಮುಖ್ಯ ಸಚೇತಕ ಹಾಗೂ ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಬಿತಾ ಮಿಸ್ಕಿತ್, ನಾಗವೇಣಿ ಪ್ರಮುಖರಾದ ಫಾ. ಸ್ಟ್ಯಾನ್ಲಿ ಪಿರೇರಾ, ಡಾ. ಬಿ.ಜಿ.ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು .