- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಡ್ರೈನೇಜ್ ಗುಂಡಿಗೆ ಕಾರ್ಮಿಕರನ್ನು ಇಳಿಸಿ ಅಮಾನವೀಯ ಕೃತ್ಯ; ಮನಪಾ ಕ್ರಮವನ್ನು ಖಂಡಿಸಿ ಪ್ರತಿಭಟನಾ ಪ್ರದರ್ಶನ

CPI [1]ಮಂಗಳೂರು: ಮನಪಾ ವ್ಯಾಪ್ತಿಯಲ್ಲಿ ವ್ಯಾಪಕಗೊಂಡಿರುವ ಡ್ರೈನೇಜ್ ಅವ್ಯವಸ್ಥೆಯನ್ನು ಸರಿಪಡಿಸುವ ನೆಪದಲ್ಲಿ ಡ್ರೈನೇಜ್‌ನ ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿ ಅಮಾನವೀಯ ಕೃತ್ಯ ಎಸಗಿದ ಮಂಗಳೂರು ಮಹಾನಗರ ಪಾಲಿಕೆಯ ದುಷ್ಕೃತ್ಯಗಳ ವಿರುದ್ಧ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಒತ್ತಾಯಿಸಿ ಇಂದು ಸಿಪಿಐ(ಎಂ) ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ಮಂಗಳೂರಿನ ಮಾನ ಹರಾಜು ಹಾಕಿದ ಮನಪಾಕ್ಕೆ ಧಿಕ್ಕಾರ, ಅಮಾನವೀಯ ಕೃತ್ಯ ಎಸಗಿದ ಮನಪಾಕ್ಕೆ ಧಿಕ್ಕಾರ, ಘಟನೆಯನ್ನು ಸಮರ್ಥಿಸಿದ ಮೇಯರ್ ರಾಜಿನಾಮೆ ನೀಡಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್ ಮಾತನಾಡುತ್ತಾ ಈಗಾಗಲೇ ಮಂಗಳೂರು ನಗರಕ್ಕೆ ಡ್ರೈನೇಜ್ ವ್ಯವಸ್ಥೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಎಡಿಬಿಯಿಂದ ಸಾಲ ತಂದು 15 ವರ್ಷಗಳು ಕಳೆದರೂ ಇಂದಿನವರೆಗೂ ಯಾವುದೇ ವ್ಯವಸ್ಥೆಯಾಗಿಲ್ಲ. ಈಗ ಮತ್ತೆ ಡ್ರೈನೇಜ್ ದುರಸ್ಥಿಗಾಗಿ ಅಮೃತ್ ಯೋಜನೆಯಿಂದ ಸಾಲ ತರಲಾಗಿದೆ. ಒಟ್ಟಿನಲ್ಲಿ ಡ್ರೈನೇಜ್ ಹೆಸರಿನಲ್ಲಿ ಭಾರೀ ಹಗರಣವೊಂದು ನಡೆದಿದ್ದು ಕೋಟ್ಯಾಂತರ ರೂಪಾಯಿ ಹಣವನ್ನು ಗುಳುಂ ಮಾಡಲಾಗಿದೆ. ಆದರೆ ಅದರ ದುರಸ್ಥಿಗಾಗಿ ಇಂದಿಗೂ ಕಾರ್ಮಿಕರನ್ನು ಬಳಸುತ್ತಿರುವುದು ತೀರಾ ಖಂಡನೀಯ.

2 ದಿನಗಳಲ್ಲಿ 2 ಘಟನೆಗಳು ನಗರದ ಹೃದಯಭಾಗದಲ್ಲಿ ನಡೆದಿದ್ದರೂ, ಮೇಯರ್ ಕಮೀಷನರ್ ಉದ್ದಟತನದಿಂದ ವರ್ತಿಸಿರುವುದು ಬೇಜವಾಬ್ದಾರಿಯ ಪರಮಾವಧಿಯಾಗಿದೆ. ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗಳಿಗೆ ಇಳಿಸಿ ದುಡಿಸಬಾರದೆಂಬ ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನವಿದ್ದರೂ ಇಂದು ಅವುಗಳನ್ನೆಲ್ಲ ಗಾಳಿಗೆ ತೂರಲಾಗಿದೆ. ಮೇಯರ್ ಕಮೀಷನರ್ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದಲ್ಲಿ ನಗರದಾದ್ಯಂತ ಜನಾಂದೋಲನ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿಯ ಸದಸ್ಯರಾದ ಯೋಗೀಶ್ ಜಪ್ಪಿನಮೊಗರುರವರು ಇಡೀ ಘಟನೆಯನ್ನು ಎಳೆಎಳೆಯಾಗಿ ವಿವರಿಸುತ್ತಾ ಇಡೀ ಘಟನೆಯು ದೇಶದ ಗಮನ ಸೆಳೆದಿದ್ದು, ಇದಕ್ಕೆ ಕೂಡಲೇ ಸ್ಪಂದಿಸಬೇಕಾಗಿದ್ದ ಮೇಯರ್ ಕಮೀಷನರ್‌ರವರು ಸುಳ್ಳು ಹೇಳಿಕೆಗಳನ್ನು ನೀಡಿ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಅಭಿವೃದ್ಧಿಯ ಬಗ್ಗೆ ಬಡಾಯಿಕೊಚ್ಚಿಕೊಳ್ಳುವ ಕಾಂಗ್ರೆಸ್, ಬಿಜೆಪಿಯವರು ಡ್ರೈನೇಜ್‌ನ ಕೆಲಸಗಳನ್ನು ಮಾಡಲು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಲು ಯಾಕೆ ಮುಂದಾಗುತ್ತಿಲ್ಲ? ಇಂದಿಗೂ ಅವರ ಯೋಚನೆಗಳು ಕೊಳಕಿನಿಂದ ತುಂಬಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಎಸ್‌ಎಸ್‌ನ ರಾಜ್ಯ ನಾಯಕರಾದ ಎಂ. ದೇವದಾಸ್, ಡಿವೈಎಫ್‌ಐನ ಜಿಲ್ಲಾ ನಾಯಕರಾದ ನಿತಿನ್ ಕುತ್ತಾರ್, ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ವಾಸುದೇವ ಉಚ್ಚಿಲ್‌ರವರು ಮಾತನಾಡುತ್ತಾ ಬುದ್ಧಿವಂತರ ಪ್ರಜ್ಞಾವಂತರ ಜಿಲ್ಲೆಯಾದ ಮಂಗಳೂರಿನಲ್ಲಿ ಡ್ರೈನೇಜ್‌ನ ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಬಳಸುವುದು ಹೇಯಕೃತ್ಯವಾಗಿದ್ದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಹೋರಾಟದ ನೇತೃತ್ವವನ್ನು ಸಿಪಿಐ(ಎಂ) ನಾಯಕರಾದ ಸಂತೋಷ್ ಶಕ್ತಿನಗರ, ಸಂತೋಷ್ ಬಜಾಲ್, ಸಾದಿಕ್ ಕಣ್ಣೂರು, ಪ್ರೇಮನಾಥ ಜಲ್ಲಿಗುಡ್ಡೆ, ಸುರೇಶ್ ಬಜಾಲ್, ದಿನೇಶ್ ಶೆಟ್ಟಿ, ಭಾರತಿ ಬೋಳಾರ್, ದಲಿತ ಸಂಘಟನೆಯ ಜಿಲ್ಲಾ ನಾಯಕರಾದ ತಿಮ್ಮಯ್ಯ ಕೊಂಚಾಡಿ, ರಘುವೀರ್, ಯಮುನಾ ಪಚ್ಚನಾಡಿ, ರಘು ಎಕ್ಕಾರು ಮುಂತಾದವರು ವಹಿಸಿದ್ದರು.