- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಧಿಕಾರಿ ಎಸ್.ಎಂ ಜಾಮದಾರ್ ಹೇಳಿಕೆ ಸರಿಯಲ್ಲ : ಶ್ರೀ ವಿಶ್ವೇಶತೀರ್ಥರು

pejavara shri [1]ಉಡುಪಿ: “ನಿವೃತ್ತ ಐಎಎಸ್‌ ಅಧಿಕಾರಿ ಎಸ್.ಎಂ ಜಾಮದಾರ್, ಲಿಂಗಾಯತರು ಇಷ್ಟರ ವರೆಗೂ ಹಿಂದೂಗಳಾಗಿರಲಿಲ್ಲ ಎಂದು ಹೇಳಿರುವ  ಹೇಳಿಕೆ ಸರಿಯಲ್ಲ. ಹಿಂದೆ ನಡೆದಿದ್ದ ಬಹುತೇಕ ಹಿಂದೂ ಸಮಾವೇಶ, ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಲಿಂಗಾಯಿತ ಮಠಾಧೀಶರೂ ಪಾಲ್ಗೊಂಡಿದ್ದಾರೆ.” ಎಂದು ಉಡುಪಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ.

ಇಂದು ಪತ್ರಕರ್ತರೊದನೆ ಮಾತನಾಡಿದ ಶ್ರೀಗಳು “1968ರಲ್ಲಿ ಉಡುಪಿಯಲ್ಲಿ ನಡೆದಿದ್ದ ವಿಶ್ವಹಿಂದೂ ಪರಿಷತ್ ಪ್ರಾಂತೀಯ ಸಮಾವೇಶದಲ್ಲಿ ಸಿದ್ದಗಂಗಾ ಶ್ರೀಗಳು, ಅಂದಿನ ಸುತ್ತೂರು ಸಂಸ್ಥಾನದ ಗುರುಗಳು ಭಾಗವಹಿಸಿದ್ದರು. ಹಿಂದೂ ಪರ ಹೋರಾಟಗಳಲ್ಲಿ ಎಲ್ಲರೂ ಒಂದಾಗೋನ ಎಂದಿದ್ದ ಜನರೇ ಇಂದು ಹೊಸ ಧರ್ಮ ಬೇಕು ಬೇದವೆನ್ನುವ ಚರ್ಚೆ ಪ್ರಾರಂಭಿಸಿದ್ದಾರೆ. ಇದು ಬೇಸರ ವಿಷಯ” ಎಂದರು.

“ಲಿಂಗಾಯತರು ಹಿಂದೂ ಧರ್ಮವನ್ನು ತೊರೆಯದಿರಿ ಎಂದು ನಾನು ಹೇಳಿದ್ದೆ. ನನಗೆ ಯಾರ ಭಯ ಇಲ್ಲ. ಯಾರ ಮೇಲೆಯೂ ವಿರೋಧವಿಲ್ಲ. ಲಿಂಗಾಯಿತರೂ ನಮ್ಮವರು ಎನ್ನುವುದು ನನ್ನ ಕಾಳಜಿಯಾಗಿದೆ. ಇದರಲ್ಲಿ ವೈಯಕ್ತಿಕ ಸ್ವಾರ್ಥವಿಲ್ಲ” ಶ್ರೀಗಳು ತಿಳಿಸಿದರು. “ಹಿಂದೂ ಧರ್ಮದಲ್ಲಿ ಹಲವಾರು ಪಂಥಗಳಿವೆ. ಬಗೆ ಬಗೆಯ ಆಚರಣೆಗಳಿವೆ, ಆದರೆ ಎಲ್ಲರೂ ಹಿಂದೂ ಧರ್ಮದಲ್ಲಿ ಇದ್ದಾರೆ “ಎಂದು ಹೇಳಿದರು. “ಮುಂದಿನ ಜ.18ರ ನಂತರ ಲಿಂಗಾಯಿತ ಧರ್ಮದ ಕುರಿತು ವಿಧಾನ ಸೌಧದಲ್ಲಿ ಚರ್ಚೆ ಆಗುವುದಾದರೆ ನಾನೂ ಅದರಲ್ಲಿ ಪಾಲ್ಗೊಳ್ಳುತ್ತೇನೆ. ಅದಕ್ಕೂ ಮುನ್ನ ಚರ್ಚೆ ಬಯಸಿದವರು ಉಡುಪಿ ಮಠಕ್ಕೆ ಬರಬಹುದು. ” ಶ್ರೀಗಳು ಹೇಳಿದರು.