- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಜಪೆ: ಸಭೆಯ ಕಲಾಪ ಹಾಗೂ ನಡವಳಿಕೆಗಳ ವೀಡಿಯೋ ಚಿತ್ರೀಕರಣ

bajpe gram panchayath [1]ಮಂಗಳೂರು : ಬಜಪೆ ಗ್ರಾ.ಪಂಚಾಯತ್‌, ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯ ಕಲಾಪ ಹಾಗೂ ನಡವಳಿಕೆಗಳ ವೀಡಿಯೋ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿದೆ. ಸರಕಾರದ ಸುತ್ತೋಲೆ ಯಂತೆ ಈ ಹೆಜ್ಜೆಯನ್ನಿಟ್ಟ ಪ್ರಥಮ ಗ್ರಾಮ ಪಂಚಾಯತ್‌ ಇದಾಗಿದ್ದು, ಆಡಳಿತದ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಲಿದೆ.

ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್‌ ರಾಜ್ಯ ಕಾಯ್ದೆ (ಸಭಾ ನಡಾವಳಿ, ಕಾರ್ಯವಿಧಾನ) 1993-94ರ ಪ್ರಕಾರ ಸಭೆಯನ್ನು ಯಾವ ರೀತಿ ನಡೆಸಬೇಕು. ನಡಾವಳಿ ಹೇಗಿರಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಸಭಾ ಕಾರ್ಯಕಲಾಪ, ಅಡ್ಡಪ್ರಶ್ನೆ ಬಗ್ಗೆ 1994ರಲ್ಲಿ ನಿಯಮವನ್ನು ಮಾಡಿದೆ.

ಸೆ. 18ರಂದು ಸರಕಾರದಿಂದ ಎಲ್ಲ ಗ್ರಾ.ಪಂ. ಗಳಿಗೆ ಬಂದಿರುವ ಸುತ್ತೋಲೆ ಪ್ರಕಾರ, ಪ್ರತಿ ಸಭೆಯ ವೀಡಿಯೋ ಚಿತ್ರೀಕರಣ ಮಾಡಿ, ಅದನ್ನು 24 ಗಂಟೆಯೊಳಗೆ ಪಿಡಿಒ ಅವರು ಪಂಚತಂತ್ರಕ್ಕೆ ಅಪ್‌ ಲೋಡ್‌ ಮಾಡಬೇಕಾಗಿದೆ. ನಡಾವಳಿಗೆ ಅಧ್ಯಕ್ಷರು ಸಹಿ ಹಾಕದಿದ್ದರೂ ಇದು ಕಡ್ಡಾಯ.

ಗ್ರಾಮಸ್ಥರು ಹಾಗೂ ಇತರರು ಈ ಕಲಾಪದ ಹಾಗೂ ನಡಾವಳಿಯ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಿದ್ದಲ್ಲಿ ಈ ಸಿಡಿ ಕೊಡಬಹುದು.ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಬಳಸಬಹುದು. ಇದರಿಂದ ಈ ವೀಡಿಯೋ ಚಿತ್ರೀಕರಣ ಹೆಚ್ಚು ಪ್ರಾಮುಖ್ಯ ಪಡೆದಿದೆ.

ಜಿಲ್ಲೆಯಲ್ಲಿ ಬಹುತೇಕ ಎಲ್ಲ ಗ್ರಾಮ ಸಭೆಯ ಕಲಾಪಗಳನ್ನು ವೀಡಿಯೋ ಚಿತ್ರೀಕರಣ ಮಾಡಲಾಗುತ್ತಿತ್ತು. ಬಜಪೆ ಗ್ರಾ.ಪಂ. ಸಭಾಭವನದಲ್ಲಿ ಅ. 25ರಂದು ಸಾಮಾನ್ಯ ಸಭೆ ನಡೆಯಲಿದ್ದು, ಇದರ ಕಾರ್ಯ ಕಲಾಪಗಳ ವೀಡಿಯೋ ಚಿತ್ರೀಕರಣ ಮಾಡುತ್ತಿರುವ ಜಿಲ್ಲೆಯ ಮೊದಲ ಗ್ರಾಪಂ ಎಂಬ ಹೆಗ್ಗಳಿಕೆಗೆ ಬಜಪೆ ಪಾತ್ರವಾಗಲಿದೆ. ಇದಕ್ಕಾಗಿ ಸಭಾಭವನದಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿದೆ. ಚಿತ್ರೀಕರಣದ ಜತೆಗೆ ಧ್ವನಿಯೂ ರೆಕಾರ್ಡ್‌ ಆಗಲಿದೆ. ಹೆಚ್ಚುವರಿಯಾಗಿ ಮೆಮೊರಿ ಕಾರ್ಡ್‌ ಬೇಕಿದ್ದರೂ ಬಳಸಿ ಸಂಪೂರ್ಣ ಕಲಾಪವನ್ನು ಚಿತ್ರೀಕರಿಸಲಾಗುವುದು.

ಸಭೆಯಲ್ಲಿ ಸದಸ್ಯರ ಹೇಳಿಕೆ, ನಡವಳಿಕೆ ಹಾಗೂ ನಡಾವಳಿಯಲ್ಲಿ ನಮೂದಿಸದ ಕಲಾಪವನ್ನು ವೀಡಿಯೋ ಚಿತ್ರೀಕರಣದ ಮೂಲಕ ತಿಳಿಯಬಹುದು. ಸಭೆಯಲ್ಲಿ ಗ್ರಾ.ಪಂ. ಸದಸ್ಯರು ತಮ್ಮ ವಾರ್ಡ್‌ನ ಜನರ ಆಹವಾಲು ಮುಂದಿಟ್ಟಿದ್ದಾರೆಯೋ ಎಂದೂ ತಿಳಿಯಲು ಅನುಕೂಲ. ಎಲ್ಲ ಕಲಾಪಗಳ ಚಿತ್ರೀಕರಣ ಮಾಡುವುದರಿಂದ ಪಾರದರ್ಶಕ ಆಡಳಿತಕ್ಕೂ ಚಾಲನೆ ಸಿಗಬಹುದು. ಮಾಹಿತಿ ಹಕ್ಕಿನಡಿ ಗ್ರಾಮಸ್ಥರು ಈ ಸಿಡಿಯನ್ನು ಕೇಳಿ ಪಡೆಯಲೂ ಅವಕಾಶವಿದೆ. ನೇರ ಪ್ರಸಾರದ ಅವಕಾಶ ಸಿಕ್ಕರೆ ಸ್ಥಳೀಯ ಕೇಬಲ್‌ ಚಾನೆಲ್‌ಗಳ ಮೂಲಕ ಮನೆಯಲ್ಲೇ ಕೂತು ಗ್ರಾಪಂ ಸಾಮಾನ್ಯ ಸಭೆಯ ಕಲಾಪ ವೀಕ್ಷಿಸುವ ದಿನ ದೂರವಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಎಲ್ಲ ಸದಸ್ಯರ ಪ್ರಶ್ನೆಗಳ ಬಗ್ಗೆ ಮಾಹಿತಿ ಅಸಕ್ತಿ ಇದ್ದವರಿಗೆ ಸಿಗುತ್ತದೆ. ಜವಾಬ್ದಾರಿಯುತವಾಗಿ ಗ್ರಾಮ ಪಂಚಾಯತ್‌ ಸಭೆಯಲ್ಲಿ ವರ್ತಿಸುವಂತಾಗಿದೆ. ಗ್ರಾಮ ಪಂಚಾಯತ್‌ ಸದಸ್ಯರ ವರ್ತನೆಯ ಬಗ್ಗೆಯೂ ವೀಡಿಯೋ ಚಿತ್ರೀಕರಣಗೊಳ್ಳುವುದರಿಂದ ಆಡಳಿತ ಸುವ್ಯವಸ್ಥೆ ಹಾಗೂ ಸಭೆ ಚೆನ್ನಾಗಿ ನಡೆಯಬಹುದು ಎಂದು ಬಜಪೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರೋಜಿ ಮಥಾಯಸ್‌ ಹೇಳಿದ್ದಾರೆ.

ಸರಕಾರದ ಅದೇಶದಂತೆ ಸಾಮಾನ್ಯ ಸಭೆಯನ್ನು ಪಾರದರ್ಶಕ ಹಾಗೂ ಕ್ರಮಬದ್ಧವಾಗಿ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಬಜಪೆ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸಾಯೀಶ್‌ ಚೌಟ ಹೇಳಿದ್ದಾರೆ.